ಕೇಂದ್ರ ಸರ್ಕಾರ ನಿಗದಿಪಡಿಸಿರುವ ವೇತನ ಮಾನದಂಡಗಳಿಗೆ ಅನುಗುಣವಾಗಿ ಸಂಬಳ ನೀಡಬೇಕು ಹಾಗೂ ತಾವು ನಿರ್ವಹಿಸುತ್ತಿರುವ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂದು ಒತ್ತಾಯಿಸಿದ ಕಾರ್ಮಿಕರು, ನ್ಯಾಯಯುತ ವೇತನ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟುಹಿಡಿದರು. ಬೆಳಗ್ಗೆಯೇ ಗಾರ್ಮೆಂಟ್ಸ್ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳಾ ನೌಕರರು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕೆಲಸಕ್ಕೆ ತಕ್ಕ ನ್ಯಾಯಯುತ ವೇತನ ನೀಡುವಂತೆ ಆಗ್ರಹಿಸಿ ನಗರದ ಶಾಹಿ ಗಾರ್ಮೆಂಟ್ಸ್ನ ಸಾವಿರಾರು ಮಹಿಳಾ ಕಾರ್ಮಿಕರು ಗುರುವಾರ ಕೆಲಸ ಸ್ಥಗಿತಗೊಳಿಸಿ ಕಾರ್ಖಾನೆಯ ಮುಂಭಾಗದಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ನಿಗದಿಪಡಿಸಿರುವ ವೇತನ ಮಾನದಂಡಗಳಿಗೆ ಅನುಗುಣವಾಗಿ ಸಂಬಳ ನೀಡಬೇಕು ಹಾಗೂ ತಾವು ನಿರ್ವಹಿಸುತ್ತಿರುವ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂದು ಒತ್ತಾಯಿಸಿದ ಕಾರ್ಮಿಕರು, ನ್ಯಾಯಯುತ ವೇತನ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟುಹಿಡಿದರು. ಬೆಳಗ್ಗೆಯೇ ಗಾರ್ಮೆಂಟ್ಸ್ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳಾ ನೌಕರರು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.ಸುಮಾರು ಮಧ್ಯಾಹ್ನ 1.30ರವರೆಗೆ ಪ್ರತಿಭಟನೆ ಮುಂದುವರಿಯಿತು. ಬಳಿಕ ಕಾರ್ಮಿಕರಲ್ಲಿ ಒಂದು ಗುಂಪು ಸೋಮವಾರದವರೆಗೆ ಆಡಳಿತ ಮಂಡಳಿಗೆ ಕಾಲಾವಕಾಶ ನೀಡಲು ನಿರ್ಧರಿಸಿ ಕೆಲಸಕ್ಕೆ ಮರಳಿತು. ಅಷ್ಟರೊಳಗೆ ಸೂಕ್ತ ವೇತನ ನಿಗದಿಪಡಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೋಮವಾರ ಮತ್ತಷ್ಟು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತು. ಮತ್ತೊಂದು ಗುಂಪಿನ ಮಹಿಳಾ ನೌಕರರು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡು ಮನೆಗಳಿಗೆ ತೆರಳಿದರು.ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ನ ಪರಾಜಿತ ಅಭ್ಯರ್ಥಿ ಎನ್. ಆರ್. ಸಂತೋಷ್ ಅವರು ಮಹಿಳಾ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಮಿಕರು ನ್ಯಾಯಯುತ ವೇತನಕ್ಕಾಗಿ ನಡೆಸುತ್ತಿರುವ ಹೋರಾಟ ಸಮಂಜಸವಾಗಿದ್ದು, ಗಾರ್ಮೆಂಟ್ಸ್ ಆಡಳಿತ ಮಂಡಳಿ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಮಹಿಳಾ ನೌಕರರಿಗೆ ಕೆಲಸಕ್ಕೆ ತಕ್ಕ ವೇತನ ನೀಡುವ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಪಾಲ್ಗೊಂಡಿದ್ದು, ವೇತನ ಸಮಸ್ಯೆಗೆ ಆಡಳಿತ ಮಂಡಳಿ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ