ಶಹಾಪುರ: ಧಾರಾಕಾರ ಮಳೆಗೆ 80ಕ್ಕೂ ಹೆಚ್ಚು ಮನೆಗಳ ಹಾನಿ

| Published : Sep 05 2024, 12:35 AM IST

ಸಾರಾಂಶ

Shahpur: More than 80 houses damaged due to torrential rain

- ಮಳೆಯಿಂದ ಜನಜೀವನ ಅಸ್ತವ್ಯಸ್ತ, ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ನೀರು

-----

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗೆ ರೈತರು ನಲುಗಿದ್ದಾರೆ.

ನಾಲ್ಕಾರು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು, ಚರಂಡಿಗಳು ಹಾಗೂ ಹಯ್ಯಾಳ ಬಿ., ಬಸವಂತಪುರ, ಮುನ್ಮುಟಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೊಲ-ಗದ್ದೆಗಳು ಮಳೆ ನೀರಿನಿಂದ ಜಲಾವೃತವಾಗಿವೆ. ಬೆಳೆದ ಬೆಳೆಗಳು ಹಾಳಾಗಿವೆ.

ತಾಲೂಕಿನ ಉಕ್ಕಿನಾಳ, ದೋರನಹಳ್ಳಿ, ವನದುರ್ಗ, ಗುಂಡಳ್ಳಿ, ದಿಗ್ಗಿ, ಖಾನಾಪುರ್, ಟೊಣ್ಣೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ 80ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ತಾಲೂಕಿನ ದೋರನಹಳ್ಳಿ, ಮರಕಲ್, ತಂಗಡಗಿ, ಹುರಸಗುಂಡಗಿ ಸೇರಿದಂತೆ 15 ಮನೆಗಳಿಗೆ ನೀರು ನುಗ್ಗಿದೆ.

ಮಳೆ ವಿವರ: ಆ.28ರಂದು ಗೋಗಿ 12, ಭೀಮರಾಯನ ಗುಡಿ 2 ಮೀಮೀ ಮಳೆಯಾಗಿದೆ. ಆ.29, ದೋರನಹಳ್ಳಿ 8 ಮೀಮಿ ಮಳೆಯಾಗಿದೆ. ಆ.30ರಂದು ಶಹಾಪುರ 13.4, ಭೀಮರಾಯನ ಗುಡಿ 15.2, ದೋರನಹಳ್ಳಿ 4 ಮೀಮೀ ಮಳೆಯಾಗಿದೆ. ಆ.31ರಂದು ಶಹಾಪುರ 4.4, ಭೀಮರಾಯನ ಗುಡಿ 5.2, ದೋರನಹಳ್ಳಿ 6, ಗೋಗಿ 4.8 ಮೀಮೀ. ಮಳೆಯಾಗಿದೆ. ಸೆ.1, ಶಹಾಪುರ 32, ಭೀಮರಾಯನ ಗುಡಿ 33, ದೋರನಹಳ್ಳಿ 41, ಗೋಗಿ 28, ಹತ್ತಿಗೂಡೂರು 16 ಮೀಮೀ. ಮಳೆಯಾಗಿದೆ. ಸೆ.2 ರಂದು ಶಹಾಪುರ 14.6, ಭೀಮರಾಯನ ಗುಡಿ 15.2, ದೋರನಹಳ್ಳಿ 15, ಗೋಗಿ 14, ಹತ್ತಿಗೂಡೂರು 12 ಮೀಮೀ ಮಳೆಯಾಗಿದೆ. ಸೆ. 3ರಂದು ಶಹಾಪುರ 19.2 ಭೀಮರಾಯನ ಗುಡಿ 13, ದೋರನಹಳ್ಳಿ 17, ಗೋಗಿ 20 ಮೀಮೀ ಮಳೆಯಾಗಿದೆ.

ರೈತರ ಸಂಕಷ್ಟ ತಂದೊಡ್ಡಿದ ಮಳೆ: ಜಮೀನುಗಳಿಗೆ ಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸಿ ಬಂದಿದ್ದೇವೆ. ಮಳೆ ಸುರಿದಿದ್ದರಿಂದ ಗೊಬ್ಬರ ಮತ್ತು ಸಿಂಪಡಿಸಿದ ಕ್ರಿಮಿನಾಶಕ ಹಾಳಾಗಿದೆ. ಸಾವಿರಾರು ರೂಪಾಯಿ ವ್ಯರ್ಥವಾಗಿದೆ. ಹೊಲ ಬೆಳೆಗಳು ಹೆಚ್ಚಿನ ತೇವಾಂಶದಿಂದ ಬೆಳೆ ಹಾಳಾಗುವ ಭಯ ಶುರುವಾಗಿದೆ. ಮತ್ತೆ ಬೀಜ, ಗೊಬ್ಬರ ತರಲು ಹಣ ಇಲ್ಲದೆ ಪರದಾಡುವಂತೆ ಆಗಿದ್ದು, ಹೊಲಗಳಲ್ಲಿ ನೀರು ನಿಂತು ಬೆಳೆ ಹಾಳಾಗುತ್ತಿವೆ. ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಹಾಳಾಗಿದ್ದವು. ಈಗ ಮಳೆ ಹೆಚ್ಚಾಗಿ ಬೆಳೆ ಹಾಳಾಗುತ್ತಿವೆ. ಸರ್ಕಾರ ಇಂಥಹ ಕಷ್ಟದ ಸಮಯದಲ್ಲಿ ರೈತರ ನೆರವಿಗೆ ಬರಬೇಕು. ಕೂಡಲೇ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಹಣಮಂತರಾಯ ಟೋಕಪುರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಮಳೆ ಸುರಿಯುತ್ತಿರುವುದರಿಂದ ಕೂಲಿ ಕಾರ್ಮಿಕರರು ಕೃಷಿ ಚಟುವಟಿಕೆಗಳಿಗೆ ವಿರಾಮ ಹೇಳಿದ್ದಾರೆ. ವ್ಯಾಪಾರಸ್ಥರು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ನಸುಕಿನ ಜಾವ ಆರಂಭಗೊಂಡ ತುಂತುರು ಮಳೆ ಮುಂದುವರೆಯುತ್ತಲೇ ಇದೆ. ದಟ್ಟ ಕಾರ್ಮೋಡ ಕವಿದು, ಬಿಸಿಲು ಕಾಣದೇ ವಾತಾವರಣ ಸಂಪೂರ್ಣ ತಂಪಾಗಿದೆ.

------

ಕೋಟ್ -1: ಕಳೆದ ವರ್ಷ ಮಳೆ ಇಲ್ಲದೆ ಬೆಳೆಗಳು ನಷ್ಟ ಅನುಭವಿಸಿದ್ದವು. ಆದರೆ, ಈ ವರ್ಷ ಅತಿಯಾದ ಮಳೆಯಿಂದ ಬೆಳೆದ ಬೆಳೆಗಳು ಕೂಡ ಜಲಾವೃತವಾಗಿ ನಷ್ಟ ಅನುಭವಿಸುತ್ತಿದ್ದೇವೆ. ಸಾಲ ಮಾಡಿ ನಾವು ಬೆಳೆಗಳನ್ನು ಬೆಳೆಯುತ್ತೇವೆ. ಬೆಳೆಗಳು ಹಾಳಾಗಿವೆ. ಸರ್ಕಾರ ರೈತರ ಬಗ್ಗೆ ಗಮನಹರಿಸಿ ತ್ವರಿತವಾಗಿ ಪರಿಹಾರ ನೀಡಬೇಕು.

- ಮರಿಗೌಡ ಚಿಕ್ಕಮೇಟಿ, ಬಸವಂಪುರ ಗ್ರಾಮದ ರೈತ.

-----

4ವೈಡಿಆರ್13 : ಧಾರಕಾರವಾಗಿ ಸುರಿದ ಮಳೆ ನೀರು ಶಹಾಪುರ ತಾಲೂಕಿನ ಕೆಲಸ ಗ್ರಾಮಗಳಲ್ಲಿ ಜಮೀನೊಳಗೆ ನುಗ್ಗಿ, ಬೆಳೆಗಳು ಹಾಳಾಗಿರುವುದು.

-----

4ವೈಡಿಆರ್14: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಚಂದಪ್ಪ ಹರಿಜನ್ ಅವರ ಮನೆ ಬಿದ್ದಿರುವುದು.