ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೆಣ್ಣು ಮಕ್ಕಳ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಪುಷ್ಟಿ ನೀಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.ಸೋಮವಾರ ನಗರದ ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್. ನಿಲ್ದಾಣದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ವತಿಯಿಂದ, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ 500 ಕೋಟಿ ಮಹಿಳಾ ಪ್ರಯಾಣಿಕರು ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಸಂಚಾರ ಮಾಡಿರುವ ಹಿನ್ನೆಲೆ, ಆಯೋಜಿಸಲಾದ ಶಕ್ತಿ ಯೋಜನೆಯ ಸಂಭ್ರಮ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.2023 ರ ಜೂ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಈವರೆಗೆ ಉಡುಪಿ ಜಿಲ್ಲೆಯಲ್ಲಿ 2.57 ಕೋಟಿ ರು.ಗೂ ಹೆಚ್ಚು ಮಹಿಳೆಯರು ಸಂಚರಿಸಿದ್ದು, 90.10 ಕೋಟಿ ರು.ಗಳ ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯ ಲಾಭ ಪಡೆದು ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಹೊಂದಿ ಸ್ವಾವಲಂಬಿಗಳಾಗಬೇಕೆಂದು ಅವರು ಕರೆ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಗೀತಾ ವಾಗ್ಳೆ, ಉಡುಪಿ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ, ರೆಡ್‌ಕ್ರಾಸ್ ಕಾರ್ಯದರ್ಶಿ ಗಣನಾಥ ಎಕ್ಕಾರು ಮತ್ತಿತರರು ಇದ್ದರು.
ನಿಗಮದ ಬಸ್ಸಿಗೆ ಪೂಜೆ ಸಲ್ಲಿಸಿ, ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ, ಸಿಹಿತಿಂಡಿ ವಿತರಿಸಲಾಯಿತು.