ಸಾರಾಂಶ
ಈಡಿಗ, ಬಿಲ್ಲವ, ನಾಮದಾರಿ, ದೀವರು ಮುಂತಾದ 26 ಪಂಗಡಗಳ ವತಿಯಿಂದ ಮಾ.5ರಂದು ಸಾಗರದ ಮಾರ್ಕೆಟ್ ಮೈದಾನದಲ್ಲಿ ಶಕ್ತಿ ಸಾಗರ ಸಂಗಮ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಗುವುದು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಸಮಾಜಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಈಡಿಗ ಸಮಾಜದಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಅಭಿನಂದನಾ ಸಮಿತಿಯ ಸಂಚಾಲಕ, ಮಾಜಿ ಶಾಸಕ ಹರತಾಳು ಹಾಲಪ್ಪ ಸಾಗರದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈಡಿಗ, ಬಿಲ್ಲವ, ನಾಮದಾರಿ, ದೀವರು ಮುಂತಾದ 26 ಪಂಗಡಗಳ ವತಿಯಿಂದ ಮಾ.5ರಂದು ಸಾಗರದ ಮಾರ್ಕೆಟ್ ಮೈದಾನದಲ್ಲಿ ಶಕ್ತಿ ಸಾಗರ ಸಂಗಮ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಅಭಿನಂದನಾ ಸಮಿತಿಯ ಸಂಚಾಲಕ, ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಸಮಾಜಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಈಡಿಗ ಸಮಾಜದಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಸೇರಿದಂತೆ ಅನೇಕ ಕಡೆಗಳ ಸಮುದಾಯ ಭವನಕ್ಕೆ ಕೋಟ್ಯಾಂತರ ರು. ನೆರವು ನೀಡಿದ್ದಾರೆ ಎಂದರು.ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ದೂರವಾಗುವ ಹೇಳಿಕೆ ನೀಡಿದಾಗಲೇ ಈ ಸನ್ಮಾನ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಹಲವಾರು ಕಾರಣಗಳಿಂದ ಆಗಿರಲಿಲ್ಲ. ಈಗ ನಮ್ಮ ಸಮಾಜದವರು ಮತ್ತೆ ಚರ್ಚಿಸಿ ಈ ಸನ್ಮಾನವನ್ನು ಆಯೋಜಿಸಿದ್ದೇವೆ. ರಾಜ್ಯದ ವಿವಿಧ ಕಡೆಗಳಿಂದು ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದರು.
ಇದೊಂದು ಶಕ್ತಿ ಸಾಗರ ಸಂಗಮವೇ ಆಗಲಿದೆ. ಜೊತೆಗೆ ಈಡಿಗರ ಸಮಾವೇಶವು ನಡೆಯಲಿದೆ. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನಾವು ಒತ್ತಾಯಕೂಡ ಮಾಡುತ್ತೇವೆ. ಈಡಿಗ ಸಮಾಜದ ಸಾಂಸ್ಕೃತಿಕ ಆನಾವರಣವು ಕೂಡ ನಡೆಯಲಿದೆ. ಎಲ್ಲಾ ರಾಜಕೀಯ ಗಣ್ಯರು, ಅಭಿಮಾನಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಬಿ.ಸ್ವಾಮಿರಾವ್, ಡಾ.ರಾಜನಂದಿನಿ, ಅಶೋಕ್ ಮೂರ್ತಿ, ರಾಜಶೇಖರ್, ಭರ್ಮಪ್ಪ, ಅರುಣ್ ಕುಗ್ವೆ, ರೂಪ, ಸುಧಾಕರ್ ಮುಂತಾದವರು ಇದ್ದರು.
- - - (-ಫೋಟೋ: ಹರತಾಳು ಹಾಲಪ್ಪ)