ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ದಾವಣಗೆರೆ ಜಿಲ್ಲೆಯು ಜಾಗತಿಕ ಮನ್ನಣೆ ಪಡೆಯುವಂತಾಗಲು ಹಿರಿಯ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರೇ ಕಾರಣ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದ್ದಾರೆ.
- ಶಿವಗಂಗೋತ್ರಿಯಲ್ಲಿ ಮೌನಾಚರಣೆ, ಶ್ರದ್ಧಾಂಜಲಿ । ಎಸ್ಎಸ್ ಶಾಶ್ವತ ಕೊಡುಗೆಗಳಿಂದ ಲಕ್ಷಾಂತರ ಜನರ ಬದುಕಿದೆ ಉಸಿರು - - -
ಕನ್ನಡಪ್ರಭ ವಾರ್ತೆ ದಾವಣಗೆರೆಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ದಾವಣಗೆರೆ ಜಿಲ್ಲೆಯು ಜಾಗತಿಕ ಮನ್ನಣೆ ಪಡೆಯುವಂತಾಗಲು ಹಿರಿಯ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರೇ ಕಾರಣ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.
ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಿವಿಯಲ್ಲಿ ಮಂಗಳವಾರ ನಡೆದ ದಿವಂಗತ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಎಸ್‌ಎಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಶಾಮನೂರು ಶಿವಶಂಕರಪ್ಪ ಅವರು ನೀಡಿದ ಶಾಶ್ವತ ಕೊಡುಗೆಗಳು, ಲಕ್ಷಾಂತರ ಜನರ ಬದುಕಿಗೆ ಉಸಿರಾಗಿವೆ ಎಂದರು.ಒಂದು ಕಾಲದ ಕೈಗಾರಿಕಾ ನಗರ, ವಾಣಿಜ್ಯ ನಗರಿಯಾಗಿದ್ದ ದಾವಣಗೆರೆಯನ್ನು ವಿದ್ಯಾನಗರಿ, ವಿದ್ಯಾಕಾಶಿಯನ್ನಾಗಿ ಪರಿವರ್ತಿಸಿದವರು ಶಾಮನೂರು ಶಿವಶಂಕರಪ್ಪ. ಅವರು ನೀಡಿದ ಉದಾರ ದೇಣಿಗೆಯಿಂದಾಗಿಯೇ ದಾವಣಗೆರೆ ವಿವಿ ಸ್ಥಾಪನೆಯಾಗಿದೆ. ಎಸ್‌ಎಸ್ ಅವರ ಸಹಕಾರ, ನೆರವಿನಿಂದ ದಾವಿವಿ ಈಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಹೇಳಿದರು.
ಶಾಮನೂರು ಸ್ಥಾಪಿಸಿದ, ಮುನ್ನಡೆಸಿದ ಪ್ರತಿಯೊಂದು ಸಂಸ್ಥೆ, ಅಲ್ಲಿ ಓದುವ-ಕೆಲಸ ಮಾಡುವ ಪ್ರತಿಯೊಬ್ಬರೂ ಎಸ್‌ಎಸ್ ಅವರನ್ನು ಸ್ಮರಿಸದೇ, ಕೆಲಸ ಆರಂಭಿಸಿದ ದಿನಗಳೇ ಇಲ್ಲ. ಜೀವನ ಶಿಸ್ತು, ಸರಳತೆ, ಆರ್ಥಿಕ ಬಿಗಿ, ರಾಜಕೀಯ ಇಚ್ಛಾಶಕ್ತಿ ಮತ್ತು ದೈವತ್ವದ ಬಲ ಶಾಮನೂರು ಶಿವಶಂಕರಪ್ಪ ಅವರ ಬೆಳವಣಿಗೆಗೆ ಶಕ್ತಿಯಾಗಿ ನಿಂತಿದ್ದವು. ತಮ್ಮ ದುಡಿಮೆಯಿಂದ ಗಳಿಸಿದ ಲಾಭದ ಒಂದಿಷ್ಟು ಭಾಗ ದಾನ, ಧರ್ಮಕ್ಕೆ ಮೀಸಲಿಟ್ಟು ಶರಣ ತತ್ವವನ್ನು ಪಾಲಿಸಿದ ನಿಜವಾದ ಶರಣರಾಗಿದ್ದರು ಎಂದು ಸ್ಮರಿಸಿದರು.ಶಾಮನೂರು ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮಹಾನ್ ಚೇತನ. ಶಾಸಕ, ಸಚಿವ, ಸಂಸದರಾಗಿ ಜಿಲ್ಲೆ ಅಭಿವೃದ್ಧಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ. ಎಸ್‌ಎಸ್ ಅವರ ಅಗಲಿಕೆಯಿಂದ ದಾವಿವಿ ಮಾತ್ರವಲ್ಲ, ದಾವಣಗೆರೆ ಜಿಲ್ಲೆ, ರಾಜ್ಯಕ್ಕೂ ಬಹುದೊಡ್ಡ ನಷ್ಟವಾಗಿದೆ. ಅನುಭವಿ ನಾಯಕ, ಆರ್ಥಿಕ ಚಿಂತಕ, ಮಾರ್ಗದರ್ಶಕರೊಬ್ಬರನ್ನು ನಾವು ಕಳೆದುಕೊಂಡಂತಾಗಿದೆ ಎಂದು ಪ್ರೊ. ಬಿ.ಡಿ.ಕುಂಬಾರ ಹೇಳಿದರು.
ದಾವಿವಿ ಎಂಬಿಎ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಜೆ.ಕೆ.ರಾಜು ಮಾತನಾಡಿ, ಸರಳ ವ್ಯಕ್ತಿತ್ವದ, ಕ್ರಿಯಾಶೀಲ ಚಿಂತನೆ ಸಮೃದ್ಧ ವ್ಯಕ್ತಿ ಶಾಮನೂರು ಶಿವಶಂಕರಪ್ಪ. ರಾಜಕೀಯ, ಆರ್ಥಿಕವಾಗಿ ಎಷ್ಟೇ ಎತ್ತರಕ್ಕೇರಿದ್ದರೂ ಸಮಾಜ ಸೇವೆಗೆ ನೀಡಿದ ಕೊಡುಗೆ ಮರೆಯಲಾಗದು. ಆರ್ಥಿಕ ಶಿಸ್ತು, ಬದ್ಧತೆ ಮೂಲಮಂತ್ರವಾಗಿತ್ತು. ಉದ್ಯಮಿ, ಸಮಾಜ ಸೇವಕ, ಧಾರ್ಮಿಕ ಮುಖಂಡ, ರಾಜಕೀಯ ನಾಯಕ, ಆರ್ಥಿಕ ಚಿಂತಕ, ಶೈಕ್ಷಣಿಕ ತಜ್ಞ, ಕಲಾಪೋಷಕ, ಕ್ರೀಡಾ ಪ್ರೋತ್ಸಾಹಕರಾಗಿ, ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ರಕ್ಷಕರಾಗಿದ್ದರು. ದೈವಭಕ್ತಿ, ಪೂಜೆಗೆ ಸದಾ ಗಮನ ನೀಡಿದ್ದರು. ಜಾತ್ಯತೀತ ಮನೋಭಾವ ರೂಢಿಸಿಕೊಂಡಿದ್ದರು ಎಂದರು.ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಶಿವಕುಮಾರ ಕಣಸೋಗಿ ಮಾತನಾಡಿ, ಶಾಮನೂರು ಶಿವಶಂಕರಪ್ಪನವರ ವ್ಯಕ್ತಿತ್ವವೇ ಒಂದು ಶಕ್ತಿಯಾಗಿತ್ತು. ಅಂತಹ ಹಿರಿಯರ ನಡೆ, ನುಡಿ, ಜೀವನಶೈಲಿ ಎಲ್ಲರಿಗೂ ಮಾದರಿಯಾಗಿವೆ. ಒಬ್ಬ ವ್ಯಕ್ತಿಯೇ ಒಂದು ಸಂಸ್ಥೆಯಾಗಿ ಬೆಳೆದಿರುವುದಕ್ಕೆ ಶಿವಶಂಕರಪ್ಪನವರೇ ಉದಾಹರಣೆ. ಎಸ್‌ಎಸ್ ಅವರ ನಡೆ, ನುಡಿ ಕೆಲವರಿಗೆ ಮಾರ್ಗದರ್ಶಕವಾಗಿದ್ದರೆ, ಇನ್ನು ಕೆಲವರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಶಿಶುಪಾಲ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾನಿಲಯ ಅಸ್ತಿತ್ವ, ಸ್ಥಾಪನೆ ಮತ್ತು ಬೆಳವಣಿಗೆಯ ಪ್ರತಿಯೊಂದು ಮೈಲಿಗಲ್ಲು ಸಹ ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಉಸುರುತ್ತವೆ. ವಿಶ್ವವಿದ್ಯಾನಿಲಯಕ್ಕೆ ಜಾಗ ನೀಡುವುದಿಂದ ಮೊದಲುಗೊಂಡು, ಆರಂಭಿಕ ಹಂತದ ಬೆಳವಣಿಗೆಗೆ ಬುನಾದಿಯೂ ಆಗಿದ್ದಾರೆ ಎಂದು ತಿಳಿಸಿದರು.ಕುಲ ಸಚಿವ ಎಸ್.ಬಿ. ಗಂಟಿ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಮಹಾಬಳೇಶ್ವರ, ಪ್ರೊ.ಆರ್.ಶಶಿಧರ, ಪ್ರೊ. ಜಿ.ಡಿ.ಪ್ರಕಾಶ, ಪ್ರೊ.ಶರತ್, ಡಾ.ನಾಗಭೂಷಣಗೌಡ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ಇದೇ ವೇಳೆ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಮಾಡಿ, ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
- - -(ಕೋಟ್) ಎಸ್‌ಎಸ್ ಕೇರ್ ಟ್ರಸ್ಟ್ ನೆರವಿನಿಂದ ಸ್ಥಾಪಿಸಿದ ಸ್ಪರ್ಧಾತ್ಮಕ ಪರೀಕ್ಷಾ ಉಚಿತ ತರಬೇತಿ ಕೇಂದ್ರ ಸಂಕಲ್ಪವು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಶಾಮನೂರು ನೀಡಿದ ಮಹತ್ವದ ಹಾಗೂ ಕೊನೆಯ ಕೊಡುಗೆಯಾಗಿದೆ. ಶಿವಶಂಕರಪ್ಪನವರ ವಿಶಾಲ ಹೃದಯ, ದೂರದರ್ಶಿತ್ವದ ಚಿಂತನೆ, ಸಮಾಜಪರ ಚಿಂತನೆ, ಜನಪರ ಕಾಳಜಿ ದಾವಣಗೆರೆ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.
- ಪ್ರೊ. ಬಿ.ಡಿ.ಕುಂಬಾರ, ಕುಲಪತಿ, ದಾವಿವಿ.- - -
-16ಕೆಡಿವಿಜಿ1: ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆ ಮಂಗಳವಾರ ದಾವಣಗೆರೆ ವಿವಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲ ಸಚಿವ ಎಸ್.ಬಿ.ಗಂಟಿ ಇತರರು ಎಸ್‌ಎಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.