ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಮಾನಂಪಾಡಿ ಘಜನಿ, ಮಟ್ಟು, ಕರ್ನಿರೆ ಪ್ರದೇಶದಲ್ಲಿ ಶಾಂಭವಿ ನದಿ ಉಕ್ಕಿ ಹರಿದು ನೆರೆ ಉಂಟಾಗಿ ಕೃಷಿ ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಮಳೆಗೆ ಅತಿಕಾರಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಟ್ಟು ಬಳಿ ಶಾಂಭವಿ ನದಿ ಉಕ್ಕಿ ಹರಿದು ಕೆಲ ಮನೆಗೆ ಜಲದಿಗ್ಬಂಧನ ಎದುರಾಗಿದ್ದು ಮನೆಯ ಹೊರಗಡೆ ನಿಲ್ಲಿಸಿದ್ದ ಬೈಕ್ ನೆರೆ ನೀರಿನಲ್ಲಿ ಮುಳುಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ನೆರೆ ನೀರಿನ ರಭಸಕ್ಕೆ ಮೂಲ್ಕಿ- ಮಟ್ಟು ಹಾಗೂ ಮಟ್ಟು- ಕೊಲಕಾಡಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದ್ದು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ನೆರೆಪೀಡಿತ ಸ್ಥಳಕ್ಕೆ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಮಟ್ಟು, ಜಯಕುಮಾರ್, ಪಿಡಿಒ ಶೈಲಜಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕರ್ನೀರೆ ಮುಗ್ಗೆರಬೈಲು, ಬಳ್ಕುಂಜೆ ಗುತ್ತು ಪ್ರದೇಶದಲ್ಲಿ ಶಾಂಭವಿ ನದಿ ಉಕ್ಕಿ ಹರಿದಿದ್ದು , ನೆರೆಪೀಡಿತ ಪ್ರದೇಶಗಳಿಂದ ಅನೇಕರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಮಮತಾ ಪುಂಜಾ ತಿಳಿಸಿದ್ದಾರೆ. ಮಾನಂಪಾಡಿ ಗಜನಿ ಬಳಿ ನೆರೆ ನೀರಿನಿಂದ ರಸ್ತೆ ಜಲಾವೃತವಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಶಿಮಂತೂರು ದೇವಸ್ಥಾನದ ಪರಿಸರದಲ್ಲಿ ರಾತ್ರಿ ಕೃತಕ ನೆರೆ ಉಂಟಾಗಿದ್ದು ಕೃಷಿ ಹಾನಿ ಸಂಭವಿಸಿದೆ. ನದಿ ತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಕೊಯ್ಕೊಡೆ, ಮಧ್ಯ ಸಂಪರ್ಕ ರಸ್ತೆ ಜಲಾವೃತವಾಗಿದೆ. ಇದರ ಸಮೀಪದ ಪಂಜ, ಕೊಯಿಕುಡೆ, ಮೊಗಪಾಡಿ, ಉಲ್ಯ, ಬೈಲಗುತ್ತು ಪರಿಸರ ಸುಮಾರು ನೂರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ.
ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆಯ ಸತ್ಯವತಿ ಭಂಡಾರಿ ಎಂಬವರ ಮನೆಗೆ ಭಾರೀ ಗಾಳಿ ಮಳೆಗೆ ಮರ ಬಿದ್ದು ಹೆಚ್ಚಿನ ಹಾನಿ ಉಂಟಾಗಿದೆ.