ಸರ್ಕಾರದಿಂದ ನಾಚಿಕೆಗೇಡಿನ ಕಾರ್ಯ: ಕೋಟ ಶ್ರೀನಿವಾಸ ಪೂಜಾರಿ

| Published : Jan 30 2024, 02:03 AM IST

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೋರಾಟ ನಡೆಯುತ್ತಿರುವುದು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಗಳ ನಡುವೆ ಅಲ್ಲ. ಈ ಚುನಾವಣೆ ರಾಮ ಭಕ್ತರು ಮತ್ತು ಟಿಪ್ಪು ಭಕ್ತರ ನಡುವೆ ನಡೆಯುವ ಹೋರಾಟ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕುಮಟಾದಲ್ಲಿ ನಡೆದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದ್ದಾರೆ.

ಕುಮಟಾ: ಕೆಲವೇ ದಿನಗಳಲ್ಲಿ ಬರುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಹೋರಾಟ ನಡೆಯುತ್ತಿರುವುದು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಗಳ ನಡುವೆ ಅಲ್ಲ. ಈ ಚುನಾವಣೆ ರಾಮ ಭಕ್ತರು ಮತ್ತು ಟಿಪ್ಪು ಭಕ್ತರ ನಡುವೆ ನಡೆಯುವ ಹೋರಾಟ. ಅದಲ್ಲದಿದ್ದರೆ ಎಲ್ಲ ಪರವಾನಗಿ ಪಡೆದು, ಅಧಿಕೃತವಾಗಿ ಭಗವಾಧ್ವಜ ಹಾರಿಸಿದರೆ ಪೊಲೀಸರ ಮೂಲಕ ಅದನ್ನು ತೆಗೆಸುವ ಕಾರ್ಯ ಮಾಡಿದ ಸರ್ಕಾರ ನಾಚಿಕೆಗೇಡಿನದ್ದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ಹವ್ಯಕ ಸಭಾಭನವನದಲ್ಲಿ ನೂತನ ಜಿಲ್ಲಾಧ್ಯಕ್ಷ ಎನ್.ಎಸ್‍. ಹೆಗಡೆ ಅವರ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ತಳಮಟ್ಟದಿಂದ ಕಾರ್ಯನಿರ್ವಹಿಸುತ್ತ ಬಂದಿದ್ದ ಎನ್.ಎಸ್. ಹೆಗಡೆ ಅವರನ್ನು ಈ ಜಿಲ್ಲೆಯ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವ ಕಾರ್ಯ ಮಾಡಿದೆ. ನಮ್ಮ ಪಕ್ಷ ಉಳಿದ ಪಕ್ಷಕ್ಕಿಂತಲೂ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾರ್ಯಕರ್ತರು ತಿಳಿದುಕೊಳ್ಳಬೇಕು. ರಾಜಕಾರಣ ಒಂದು ಹುದ್ದೆಗೆ ಸೀಮಿತಗೊಳ್ಳದೇ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದು ಮುಖ್ಯ. ಕಾಂಗ್ರೆಸ್ ಗ್ಯಾರಂಟಿ ನಂಬಿದ ಜನರು ಈಗ ಮೋಸಹೋಗಿದ್ದಾರೆ. ಸುಳ್ಳು, ದಿವಾಳಿತನದ ಸರ್ಕಾರದ ವಾಸ್ತವತೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಪಕ್ಷ ಸಂಘಟನೆ ಹಾಗೂ ದೇಶದ ಪಕ್ಷದ ಸೇವೆಗೆ ನಮಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎನ್ನುತ್ತಾ, ನನ್ನ ಅಧಿಕಾರಾವಧಿಯಲ್ಲಿ ಸಂಘಟನೆಯ ಮಾರ್ಗದಲ್ಲಿ ಎದುರಾದ ಅಡೆತಡೆಗಳ ಬಗ್ಗೆ ತಿಳಿಸಿ ಎಲ್ಲ ಸವಾಲುಗಳನ್ನು ಎದುರಿಸಿ ಪಕ್ಷ ಉತ್ತಮ ಸಂಘಟಿಸಿರುವ ಬಗ್ಗೆ ಸಮಾಧಾನವಿದೆ ಎಂದರು.ಪಶ್ಚಿಮ ಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಜಿ. ನಾಯ್ಕ, ಕೆ.ಜಿ. ನಾಯ್ಕ ಪ್ರಮುಖರಾದ ಶಶಿಭೂಷಣ ಹೆಗಡೆ, ಮಾಜಿ ಶಾಸಕ ವಿವೇಕಾನಂದ ವೈದ್ಯ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಸ್ವಾಗತಿಸಿದರು. ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಲೋಕಸಭಾ ಚುನಾವಣೆ ಹನುಮನ ಭಕ್ತರಿಗೂ, ಟಿಪ್ಪು ಭಕ್ತರಿಗೂ ನಡೆಯುವ ಹೋರಾಟ:

ಮುಂಬರುವ ಲೋಕಸಭಾ ಚುನಾವಣೆ ಕೇವಲ ಬಿಜೆಪಿ, ಕಾಂಗ್ರೆಸ್ ನಡುವಿನ ಹೋರಾಟವಲ್ಲ. ಹನುಮನ ಭಕ್ತರಿಗೂ, ಟಿಪ್ಪು ಭಕ್ತರಿಗೂ ನಡೆಯುವ ಹೋರಾಟವಾಗಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಮಟಾದಲ್ಲಿ ಸೋಮವಾರ ನಡೆದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಅನುಮತಿ ಪಡೆದು ಭಗವಾಧ್ವಜ ಹಾರಿಸಲಾಗಿತ್ತು. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಿದ ಕಟ್ಟೆಯ ಮೇಲೆ ಧ್ವಜ ಹಾರಿಸಿದ್ದನ್ನು ಪೊಲೀಸರು, ಜಿಲ್ಲಾಧಿಕಾರಿ ಒತ್ತಾಯಪೂರ್ವಕವಾಗಿ ಕೆಳಗಿಳಿಸಿದ್ದಾರೆ. ಪೊಲೀಸರನ್ನು ಬಳಸಿಕೊಂಡು ಧ್ವಜ ಕೆಳಗಿಳಿಸಿ ರಾಜ್ಯ ಸರ್ಕಾರ ಭಗವಾಧ್ವಜಕ್ಕೆ ಅಪಮಾನ ಮಾಡಿದೆ. ಇದಕ್ಕಿಂತ ನಾಚಿಕೆಗೆಟ್ಟ ವ್ಯವಸ್ಥೆಗಳಿಲ್ಲ ಎಂದು ವಾಗ್ದಾಳಿ ನಡೆಸಿದರು.ಸರ್ಕಾರಿ ಧ್ವಜಕಂಬವಲ್ಲದಿದ್ದರೂ ಪೊಲೀಸರನ್ನು ಬಳಸಿ ಭಗವಾಧ್ವಜ ಕೆಳಗಿಳಿಸಿದ್ದಾರೆ. ಧ್ವಜ ಕೆಳಗಿಳಿಸದಂತೆ ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಆ ಕಾರಣಕ್ಕೆ ಮುಂಬರುವ ಲೋಕಸಭಾ ಚುನಾವಣೆ ಹನುಮ ಭಕ್ತರು, ಟಿಪ್ಪುಭಕ್ತರ ನಡುವಿನ ಹೋರಾಟ ಎನ್ನುವ ಅನಿರ್ವಾಯತೆ ಎದುರಾಗಿದೆ ಎಂದರು.