ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ತುಳುನಾಡ ಆರಾಧ್ಯದೈವ ಕೊರಗಜ್ಜ ಮಹಿಮೆ ಹಿನ್ನೆಯ ಕಲ್ಜಿಗ ಕನ್ನಡ ಕಲಾತ್ಮಕ ಸಿನಿಮಾದ ಬಿಡುಗಡೆ ಸಮಾರಂಭವು ಶುಕ್ರವಾರ ಶನಿವಾರಸಂತೆ ಯಶಸ್ವಿ ಚಿತ್ರ ಮಂದಿರದ ಆವರಣದಲ್ಲಿ ನಡೆಯಿತು.ಕೊರಗಜ್ಜ ಸ್ವಾಮಿಯ ದೈವ ಶಕ್ತಿ ಸಾರುವ ಕತಾ ಹಂದರ ಹೊಂದಿರುವ ಈ ಸಿನಿಮಾಕ್ಕೆ ಮೂಲತಃ ಶನಿವಾರಸಂತೆ ಸಮೀಪದ ಮಲ್ಲಿಪಟ್ಟಣದವರಾದ, ಈಗ ಮಂಗಳೂರಿನಲ್ಲಿ ನೆಲಸಿರುವ ಉದ್ಯಮಿ ಎ.ಕೆ.ಶರತ್ ಕುಮಾರ್ ಮತ್ತು ಅವರ ಪತ್ನಿ ಮೂಲತಃ ಹೊಸಗುತ್ತಿ ಗ್ರಾಮದವರಾದ ಎ.ಎಸ್.ಸರಸ್ವತಿ ಶರತ್ ಕುಮಾರ್ ದಂಪತಿ ಚಿತ್ರದ ನಿರ್ಮಾಕರು.
ಕತೆ, ಚಿತ್ರ ಕತೆ, ಸಂಭಾಷಣೆ ನಿರ್ದೆಶನ ಸುಮನ್ ಸುವರ್ಣ ಅವರದಾಗಿದ್ದು ಚಿತ್ರದಲ್ಲಿರುವ 2 ಹಾಡುಗಳಿಗೆ ನಾದಬ್ರಹ್ಮ ಹಂಸಲೇಖ ಸಾಹಿತ್ಯ ಬರೆದು ಮತ್ತು ಸಂಗೀತ ನೀಡಿದ್ದಾರೆ. ಅರ್ಜುನ್ ಕಾಪಿಕಾಡು ಸಿನಿಮಾ ನಾಯಕರು.ಯಶಸ್ವಿ ಸಿನಿಮಾ ಮಂದಿರದ ಆವರಣದಲ್ಲಿ ಸಮಾರಂಭವನ್ನು ಶನಿವಾರಸಂತೆ ವೃತ್ತ ನಿರೀಕ್ಷಕ ಪ್ರೀತಂ ಶ್ರೇಯಕರ್ ಉದ್ಘಾಟಿಸಿ ಮಾತನಾಡಿ, ಇಂದು ಪತ್ರಿಕೆ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಇಡಿ ಮಾಧ್ಯಮ ಕ್ಷೇತ್ರದ ಬೆಳವಣಿಗೆಯ ಭರದಲ್ಲಿ ಯುವ ಸಮೂಹ ಮತ್ತು ಸಮಾಜ ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿದೆ ಎಂದು ವಿಷಾದಿಸಿದರು.
ಇಂದಿನ ಬಹಳಷ್ಟು ಸಿನಿಮಾಗಳಲ್ಲಿ ಪೊಲೀಸರನ್ನು ಖಳ ನಾಯಕರಂತೆ ಬಿಂಬಿಸಲಾಗುತ್ತಿದೆ. ಕರ್ನಾಟಕ ಪೊಲೀಸರು ಭಾರತದಲ್ಲಿ ಪ್ರಮಾಣಿಕ ಪಾರದರ್ಶಕ ಕರ್ತವ್ಯನಿರ್ವಹಿಸುತ್ತಿರುವ ಮೂಲಕ ಹೆಸರು ಗಳಿಸಿದ್ದಾರೆ ಪೊಲೀಸರಿಗೆ ಮಾನವಿಯತೆ ಇದೆ. ಆದರೆ ಸಿನಿಮಾದಲ್ಲಿ ಪೊಲೀಸರನ್ನು ಬೇರೆ ರೀತಿ ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಗ್ರಾ.ಪಂ.ಅಧ್ಯಕ್ಷ ಗೀತಾ ಹರೀಶ್ ಮಾತನಾಡಿ, ಹಿಂದೆ ಸಂಚಲನ ಸೃಷ್ಟಿಸಿದ ಕಾಂತಾರ ಸಿನಿಮಾದಂತೆಯೆ ಕಲ್ಜಿಗ ಸಿನಿಮಾ ಯಶಸ್ಸು ಗಳಿಸುವಂತೆ ಶುಭ ಹಾರೈಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿದರು.ಸಮಾರಂಭದಲ್ಲಿ ನಿರ್ಮಾಪಕ ಶರತ್ ಕುಮಾರ್ ತಂದೆ ಕೇಶವಮೂರ್ತಿ, ಸರಸ್ವತಿ ಶರತ್‍ಕುಮಾರ್ ತಂದೆ ತಿಮ್ಮೆಗೌಡ, ಶರತ್‍ಕುಮಾರ್ ಸಂಬಂಧಿ ದುರ್ಗೇಶ್, ಹಂಡ್ಲಿ ಗ್ರಾ.ಪಂ.ಸದಸ್ಯ ಬಸವರಾಜು, ಪ್ರಮುಖರಾದ ಬೆಳ್ಳಿ, ಸಿನಿಮಾ ಮಂದಿರದ ಸುರೇಶ್, ಸಮೀರ್, ಉಮೇಶ್ ಮುಂತಾದವರಿದ್ದರು.