ಸಾರಾಂಶ
ಶನಿವಾರಸಂತೆ ಏಕದಂತ ಟ್ರ್ಯಾಕ್ಟರ್ ಮಾಲೀಕರ ಸಂಘದ ವತಿಯಿಂದ 62 ದಿನಗಳ ಹಿಂದೆ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಪಟ್ಟಣದ ಚಂಗಡಹಳ್ಳಿ ರಸ್ತೆ ಬಳಿ ಪ್ರತಿಷ್ಠಾಪಿಸಿದ್ದ ಗೌರಿ-ಗಣಪತಿ ಮೂರ್ತಿಯನ್ನು ಬುಧವಾರ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸ್ಥಳೀಯ ಏಕದಂತ ಟ್ರ್ಯಾಕ್ಟರ್ ಮಾಲೀಕರ ಸಂಘದ ವತಿಯಿಂದ 62 ದಿನಗಳ ಹಿಂದೆ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಪಟ್ಟಣದ ಚಂಗಡಹಳ್ಳಿ ರಸ್ತೆ ಬಳಿ ಪ್ರತಿಷ್ಠಾಪಿಸಿದ್ದ ಗೌರಿ-ಗಣಪತಿ ಮೂರ್ತಿಯನ್ನು ಬುಧವಾರ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು. ಏಕದಂತ ಟ್ರ್ಯಾಕ್ಟರ್ ಮಾಲೀಕರ ಸಂಘದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೃಹತ್ ವೇದಿಕೆಯಲ್ಲಿ 12 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಕಳೆದ 62 ದಿನಗಳಿಂದ ಇಲ್ಲಿ ಪ್ರತಿದಿನ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿತ್ತು.ಬುಧವಾರ ಬೆಳಗ್ಗೆಯಿಂದಲೆ ಗೌರಿ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಹೋಮ ಕಾರ್ಯ ನೆರವೇರಿಸಲಾಯಿತು. ಸಂಜೆ ವಿಸರ್ಜನೆ ಮೆರವಣಿಗೆಯ ಸಲುವಾಗಿ ವಾಹನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಬೃಹತ್ ಮಂಟಪದಲ್ಲಿ ಕ್ರೇನ್ ಮೂಲಕ 12 ಅಡಿಯ ಗಣಪತಿ ಮೂರ್ತಿಯನ್ನು ಕೂರಿಸಲಾಯಿತು. ಸಂಜೆ 5 ಗಂಟೆಯಿಂದ ಗೌರಿ ಗಣಪತಿ ವಿಸರ್ಜನಾ ಮೆರವಣಿಗೆಯು ಪಟ್ಟಣದ ಕೆಆರ್‌ಸಿ ವೃತ್ತದಿಂದ ಮುಖ್ಯ ರಸ್ತೆ ಮೂಲಕ ಗುಡುಗಳಲೆ ಜಂಕ್ಷನ್ ವರೆಗೆ ತೆರಳಿತು ನಂತರ ಇದೆ ರಸ್ತೆ ಮೂಲಕ ಶೋಭಾಯಾತ್ರೆಯು ಚಂಗಡಹಳ್ಳಿ-ಸುಬ್ರಮಣ್ಯ ರಸ್ತೆ ಮೂಲಕವಾಗಿ ಸಾಗಿತು. ರಾತ್ರಿ ಕಾಜೂರು ನದಿಯಲ್ಲಿ ಗೌರಿ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಯಿತು
ಮೆರವಣಿಗೆಯ ವಿಶೇಷತೆ:ವಾದ್ಯಗೋಷ್ಠಿ, ಕೀಲು ಕುದುರೆ, ಬಾಳುಪೇಟೆಯ ಹಿಂದೂ ಟೈಗರ್ಸ್ ತಂದವರಿಂದ ನಾಸಿಕ್ ಬ್ಯಾಂಡ್, ಹೊದ್ದೂರಿನ ಕಲಾತಂಡದವರಿಂದ ವೀರಗಾಸೆ ಕುಣಿತ, ದುದ್ಲಾಪುರದ ಮಂಜುಶ್ರೀ ಜಾನಪದ ಕಲಾತಂಡದವರಿಂದ ಜಾನಪದ ನೃತ್ಯ, ಪುರುಷಕೋಡಿಯ ಕಾಳಿಕಾಂಬಾ ಗೊಂಬೆ ಬಳಗದವರಿಂದ ಗೊಂಬೆ ನೃತ್ಯ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಿತು.
ಮೆರವಣಿಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಪಟ್ಟಣದಲ್ಲಿ ಬಿಗಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.