ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಿತ್ಯ ಸಚಿವ ಕೆ.ವಿ. ಶಂಕರಗೌಡ ಮತ್ತು ಎಚ್.ಡಿ. ಚೌಡಯ್ಯ ಅವರು ಜಿಲ್ಲೆ ಕಂಡ ನಿಸ್ವಾರ್ಥ ರಾಜಕಾರಣಿಗಳು. ಅವರು ತಮ್ಮ ಮನೆ, ಮನ, ತನುವಿಗಾಗಿ ಏನನ್ನೂ ಮಾಡಿಕೊಳ್ಳದೆ ದೇಶ, ಸಮಾಜ, ಸಮಾಜದ ಕಲ್ಯಾಣಕ್ಕೆ ಅರ್ಪಿಸಿಕೊಂಡಿದ್ದ ಚೇತನಗಳು ಎಂದು ಬೇಬಿ ಮಠದ ಪೀಠಾಧಿಪತಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಬುಧವಾರ ನಡೆದ ಎಚ್.ಡಿ. ಚೌಡಯ್ಯನವರ ಜನ್ಮದಿನಾಚರಣೆಯಲ್ಲಿ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಎಚ್.ಡಿ.ಚೌಡಯ್ಯ ಸಮಾಜಸೇವೆ, ಗ್ರಾಮೀಣಾಭಿವೃದ್ಧಿ, ಕೃಷಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಸಮಾಜ ಎಂದಿಗೂ ಸ್ವಾರ್ಥಿಗಳನ್ನು ಸ್ಮರಣೆ ಮಾಡುವುದಿಲ್ಲ. ನಿಸ್ವಾರ್ಥಿಗಳನ್ನು ಶಾಶ್ವತವಾಗಿ ಸ್ಮರಿಸುತ್ತಿರುತ್ತದೆ. ಶಂಕರಗೌಡ ಮತ್ತು ಚೌಡಯ್ಯನವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಮಾಡುವುದರೊಂದಿಗೆ ಎಲ್ಲರಿಗೂ ದಾರಿದೀಪವಾಗಿದ್ದಾರೆ ಎಂದರು.ಈ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಶಂಕರಗೌಡ ಮತ್ತು ಚೌಡಯ್ಯನವರಂತೆ ನಿಸ್ವಾರ್ಥಿಗಳಾಗಬೇಕು. ಅವರನ್ನು ಎಲ್ಲರೂ ಅನುಸರಿಸುವಂತಾಗಬೇಕು. ಅವರ ಹೆಸರನ್ನು ಉಳಿಸುವ, ಕನಸುಗಳನ್ನು ಸಾಕಾರಗೊಳಿಸುವಂತಹ ಸಾಮರ್ಥ್ಯವುಳ್ಳವರು ಮುನ್ನೆಲೆಗೆ ಬರಬೇಕು. ಆ ನಿಟ್ಟಿನಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಡೀಮ್ಡ್ ಯೂನಿವರ್ಸಿಟಿಯಾಗಲಿ ಎಂದು ಆಶಿಸಿದರು.
ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ನಂಬಿಕೆ, ಆತ್ಮವಿಶ್ವಾಸವಿರಬೇಕು. ಶ್ರಮವಿಲ್ಲದೆ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ಗುರಿ ಇಟ್ಟುಕೊಂಡು ಸಾಧನೆಯಲ್ಲಿ ತೊಡಗಿದಾಗ ಏನನ್ನೂ ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳಲ್ಲಿ ಹೊಟ್ಟೆಕಿಚ್ಚಿರಬಾರದು. ಬದಲಿಗೆ ಸಾಧನೆಯ ಕಿಚ್ಚಿರಬೇಕು. ಜೀವನದಲ್ಲಿ ಏನಾಗಬೇಕೆಂದು ಈಗಲೇ ನಿರ್ಧರಿಸಿ ಅದನ್ನು ಸಾಧಿಸಿಕೊಳ್ಳುವುದಕ್ಕೆ ಇಂದಿನಿಂದಲೇ ಶ್ರಮ ವಹಿಸುವಂತೆ ಸಲಹೆ ನೀಡಿದರು.ಹೆತ್ತವರು ನಿಮ್ಮ ಬೆಳವಣಿಗೆಗಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ. ಅವರ ಶ್ರಮವನ್ನು ವ್ಯರ್ಥ ಮಾಡಬೇಕು. ಮುಪ್ಪಿನಲ್ಲಿ ಅವರನ್ನು ಮರೆಯದೆ ಅವರನ್ನು ಆರೈಕೆ ಮಾಡಿ. ಹೆತ್ತವರನ್ನು ನೋಯಿಸದಂತೆ ನೋಡಿಕೊಂಡರೆ ಭಗವಂತನ ಸೇವೆ ಮಾಡಿದಂತೆ ಎಂದರು.
ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ವಿಜಯ್‌ಆನಂದ್ ಮಾತನಾಡಿ, ಪ್ರತಿಯೊಬ್ಬರೂ ಮೌಲ್ಯಗಳನ್ನು ಉಳಿಸಿಕೊಂಡಾಗ ದೇಶ ಕಟ್ಟುವುದಕ್ಕೆ ಸಾಧ್ಯವಾಗುತ್ತದೆ. ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ಯುವಕರು ಅದನ್ನು ಪುನರುತ್ಥಾನಗೊಳಿಸಬೇಕು ಎಂದರು.ಸ್ವಾಮೀಜಿ ಅವರು ಬಹಳ ಶ್ರಮಪಟ್ಟು ಮಠ ಕಟ್ಟಿದರು. ಅಕ್ಷರ ದಾಸೋಹಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿರುವುದಲ್ಲದೆ ಅನ್ನ ದಾಸೋಹಕ್ಕೆ ದಾಸೋಹ ಭವನವನ್ನೂ ಕಟ್ಟಿದ್ದಾರೆ. ಸಂಕಲ್ಪವಿದ್ದಾಗ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಛಲದಿಂದ ಓದುವುದಕ್ಕೆ ದೃಢಸಂಕಲ್ಪ ಮಾಡಬೇಕು. ಆಗ ಯಶಸ್ಸು, ಕೀರ್ತಿ ಎಲ್ಲವೂ ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ೨೦೨೪ನೇ ಸಾಲಿನ ಡಾ.ಎಚ್.ಡಿ. ಚೌಡಯ್ಯ ಸಮಾಜಸೇವಾ ಪ್ರಶಸ್ತಿಯನ್ನು ಕೋಲಾರ ತಾಲೂಕು ಚಾಮರಹಳ್ಳಿಯ ಜೀವ ಸಂಜೀವನ ನ್ಯಾಚುರಲ್ ಲೈಫ್ ಸಂಸ್ಥಾಪಕ ಆರ್.ರಾಜಶೇಖರ್, ಗ್ರಾಮೀಣಾಭಿವೃದ್ಧಿ ಪ್ರಶಸ್ತಿಯನ್ನು ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ, ಕೃಷಿ ಪ್ರಶಸ್ತಿಯನ್ನು ಮದ್ದೂರು ತಾಲೂಕು ಮಲ್ಲನಕುಪ್ಪೆ ಗ್ರಾಮದ ಶಿವರಾಮೇಗೌಡ ಅವರಿಗೆ ನೀಡಿ ಗೌರವಿಸಲಾಯಿತು.ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿಯನ್ನು ಹೊಳಲು ಸರ್ಕಾರಿ ಪ್ರೌಢಶಾಲೆಯ ಎಚ್.ಕೆ. ಸಂಜನಾ, ಎಚ್.ಎನ್.ಧನುಷ್, ಶಿವಳ್ಳಿ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಎನ್.ಚಂದನ, ಹುಳ್ಳೇನಹಳ್ಳಿಯ ಎಚ್.ಪಿ. ಕಿಶೋರ್‌ಗೌಡ ಅವರಿಗೆ ನೀಡಲಾಯಿತು.
ಜನತಾ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ. ಮೋಹನ್‌ಕುಮಾರ್, ನಿರ್ದೇಶಕ ರಾಮಲಿಂಗಯ್ಯ, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ವಿನಯ್ ಇತರರಿದ್ದರು.