ಕಡಲನಗರಿ ಕಾರವಾರದಲ್ಲಿ ಕರಾವಳಿ ಉತ್ಸವ 2025ರ ಸಪ್ತಾಹಕ್ಕೆ ಸೋಮವಾರ ಅದ್ಧೂರಿ ಚಾಲನೆ ದೊರೆತಿದೆ. ರಾತ್ರಿ ನಡೆದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಹಾಡಿಗೆ ಕಾರವಾರಿಗರು ಕುಣಿದು ಕುಪ್ಪಳಿಸಿದರು.

ಸಂಭ್ರಮಿಸಿದ ಕಡಲನಗರಿ ಜನತೆ । ಕರಾವಳಿ ಉತ್ಸವ 2025ರ ಸಪ್ತಾಹಕ್ಕೆ ಸೋಮವಾರ ಅದ್ಧೂರಿ ಚಾಲನೆ

ಕನ್ನಡಪ್ರಭ ವಾರ್ತೆ ಕಾರವಾರ

ಕಡಲನಗರಿ ಕಾರವಾರದಲ್ಲಿ ಕರಾವಳಿ ಉತ್ಸವ 2025ರ ಸಪ್ತಾಹಕ್ಕೆ ಸೋಮವಾರ ಅದ್ಧೂರಿ ಚಾಲನೆ ದೊರೆತಿದೆ. ರಾತ್ರಿ ನಡೆದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಹಾಡಿಗೆ ಕಾರವಾರಿಗರು ಕುಣಿದು ಕುಪ್ಪಳಿಸಿದರು.

ಸರಿಯಾಗಿ 10:30ಕ್ಕೆ ವೇದಿಕೆಗೆ ಆಗಮಿಸಿದ ಶಂಕರ್ ಮಹಾದೇವನ್ ಕಾರವಾರದಲ್ಲಿ ಇದೇ ಮೊದಲಬಾರಿಗೆ ಕಾರ್ಯಕ್ರಮ ನೀಡುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದು, 7 ವರ್ಷಗಳ ಬಳಿಕ ನಡೆಯುತ್ತಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮವನ್ನು ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಬಳಿಕ ವಿಘ್ನನಿವಾರಕ ವಿಘ್ನೇಶ್ವರನನ್ನು ನೆನೆಯುತ್ತಾ, ಗಣನಾಥಾಯ ಹಾಡಿನ ಮೂಲಕ ಕಾರ್ಯಕ್ರಮ ಆರಂಭಿಸಿದರು.

ನಂತರ ಸುದೀರ್ಘ ಎರಡು ಗಂಟೆಗಳ ಕಾಲ ನಿರಂತರವಾಗಿ, ನೆರೆದಿದ್ದ ಪ್ರೇಕ್ಷಕರಿಗೆ ತ‌ಮ್ಮ‌ ಗಾನಸುಧೆಯನ್ನು ಉಣಬಡಿಸಿದ ಶಂಕರ್ ಮಹಾದೇವನ್, ಭಕ್ತಿಗೀತೆ, ದೇಶಭಕ್ತಿಗೀತೆ, ಪ್ರೇಮಗೀತೆ ಸೇರಿದಂತೆ‌ ವಿವಿಧ ಬಗೆಯ ಹಾಡುಗಳನ್ನು ತಮ್ಮ ಕಂಠಸಿರಿಯ ಮೂಲಕ‌ ಹಾಡಿ ಪ್ರೇಕ್ಷಕರನ್ನು ಕುಣಿಸಿ, ರಂಜಿಸಿದರು.

ಅಲ್ಲದೇ ಕನ್ನಡ ಗೀತೆಗಳನ್ನು ಸಹ ಹಾಡಿದ್ದು, ಯುವಕರು, ಯುವತಿಯರು, ಮಕ್ಕಳೂ ಸೇರಿದಂತೆ ನೆರೆದಿದ್ದವರು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮವನ್ನು ಸಾಕಷ್ಟು ಎಂಜಾಯ್ ಮಾಡಿದ್ದು, ಕಡಲತೀರದಾದ್ಯಂತ ಶಂಕರ್ ಮಹಾದೇವನ್ ಗಾಯನ ಸದ್ದು ಮಾಡಿದೆ.

ಇನ್ನು‌ ಉತ್ಸವದ ಮೊದಲ ದಿನದ ಹಿನ್ನೆಲೆ ಉದ್ಘಾಟನೆ ಬಳಿಕ ಕಾರ್ಯಕ್ರಮವನ್ನು ಆಸ್ವಾದಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿಯೊಂದಿಗೆ ಪ್ರೇಕ್ಷಕರ ಗ್ಯಾಲರಿಗಳಿಗೆ ತೆರಳಿ ವ್ಯವಸ್ಥೆ ಪರಿಶೀಲಿಸಿದ್ದು, ಜನರಿಂದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನೂ ಪಡೆದುಕೊಂಡರು. ಅಲ್ಲದೇ ಜನರ ನಡುವೆಯೇ ಹಾಡಿಗೆ ಎರಡು ಹೆಜ್ಜೆ ಹಾಕುವ ಮೂಲಕ ಸಚಿವ ವೈದ್ಯ ಹಾಗೂ ಶಾಸಕ ಸೈಲ್ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದು, ಈ ವೇಳೆ‌ ಎಂಎಲ್‌ಸಿ ಗಣಪತಿ ಉಳ್ವೇಕರ್, ಶಾಂತಾರಾಮ‌ ಸಿದ್ದಿ ಜೊತೆಯಾದರು.