ಶಂಕರ್ ನಾಗ್ ಇವತ್ತಿಗೂ ಕಾಡುವ ವ್ಯಕ್ತಿತ್ವ

| Published : Oct 03 2024, 01:18 AM IST

ಸಾರಾಂಶ

ಮರಣಿಸಿ 34 ವರ್ಷವಾದರೂ ಶಂಕರ್ ನಾಗ್ ಅವರದ್ದು ಇವತ್ತಿಗೂ ಕಾಡುವ ವ್ಯಕ್ತಿತ್ವ ಎಂದು ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಹೇಳಿದರು. ನಗರದ ಶ್ರೀಶೈಲ ವೃತ್ತದಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ನಡೆದ ನಟ ಶಂಕರ್ ನಾಗ್ ಹಾಗೂ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಚಿರಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮರಣಿಸಿ 34 ವರ್ಷವಾದರೂ ಶಂಕರ್ ನಾಗ್ ಅವರದ್ದು ಇವತ್ತಿಗೂ ಕಾಡುವ ವ್ಯಕ್ತಿತ್ವ ಎಂದು ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಹೇಳಿದರು.

ನಗರದ ಶ್ರೀಶೈಲ ವೃತ್ತದಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ನಡೆದ ನಟ ಶಂಕರ್ ನಾಗ್ ಹಾಗೂ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಚಿರಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಂಕರನಾಗ್ ಒಂದು ಸ್ವಪ್ನದಂತೆ. ಮಿಂಚಿ ಮರೆಯಾದ ಅದ್ಭುತ ಕಲಾವಿದ. ಬದುಕಿದ ಒಂದಿಷ್ಟೇ ವರ್ಷದಲ್ಲಿ ಎಲ್ಲರೂ ಆಶ್ಚರ್ಯ ಪಡುವಷ್ಟು ಸಾಧನೆ ಮಾಡಿ ಹೋಗಿದ್ದಾರೆ. ಸಮಯಕ್ಕೆ ಅತೀವ ಮಹತ್ವ ಕೊಡುತ್ತಿದ್ದ ಅವರು ಶ್ರಮಜೀವಿಗಳಾಗಿದ್ದರು. ಮೊದಲು ಕೆಲಸ ಮಾಡು, ಪ್ರತಿಫಲ ಆಮೇಲೆ ಎಂಬ ಸಿದ್ಧಾಂತವಿಟ್ಟುಕೊಂಡು ಸಾಯುವ ಕೊನೆ ಕ್ಷಣದ ವರೆಗೂ ಸಿನಿಮಾವನ್ನೇ ಉಸಿರಾಡಿದರು ಎಂದು ಸ್ಮರಿಸಿದರು.

ಇವತ್ತಿಗೂ ಅವರ ಚಿತ್ರಗಳು ಆಟೋ ಕಾರುಗಳ ಹಿಂದೆ ಕಂಡರೆ ಮನಸ್ಸು ಪ್ರಫುಲ್ಲವಾಗುತ್ತದೆ. ಮರೆಯಲಾಗದ, ಮರೆತಷ್ಟು ನೆನಪಾಗುವ ಅವರ ಸಿನಿಮಾ ಮತ್ತು ಬದುಕಿನಿಂದ ನಾವೆಲ್ಲಾ ತುಂಬಾ ಕಲಿಯುವುದಿದೆ ಎಂದರು.

ಅಭಿಮಾನಿಗಳ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್ ಸಿ. ದಿವುಶಂಕರ್ ಮಾತನಾಡಿ, ಶಂಕರ್ ನಾಗ್ ರವರು ನಮ್ಮ ನಿಮ್ಮಲ್ಲಿ ಇನ್ನೂ ಜೀವಂತವಿದ್ದಾರೆ. ಒಬ್ಬ ವ್ಯಕ್ತಿ ಸತ್ತು 34 ವರ್ಷವಾದರೂ ಈ ಪರಿಯಾಗಿ ನೆನಪಾಗುತ್ತಾರೆ ಅಂದರೆ ಅವರು ಜನರ ಮನದಲ್ಲಿ ಯಾವ ಸ್ಥಾನ ಪಡೆದಿದ್ದರು, ಜನರ ಪ್ರೀತಿ ಎಷ್ಟು ಗಳಿಸಿದ್ದರು ಎಂದು ತೋರಿಸುತ್ತದೆ ಎಂದು ತಿಳಿಸಿದರು.

ಶಂಕರ್ ನಾಗ್ ರವರ ಕಲಾಮಂದಿರವನ್ನು ನಗರದಲ್ಲಿ ಕಟ್ಟಿ ಹಲವಾರು ಕಲಾವಿದರಿಗೆ ಅವಕಾಶಗಳನ್ನು ಮಾಡಿಕೊಡಬೇಕೆಂಬ ಉದ್ದೇಶವಿದೆ. ಬೆಂಗಳೂರಿನಲ್ಲಿ ಯಾವುದಾದರೂ ಒಂದು ನಿಲ್ದಾಣದಲ್ಲಿ ಮೆಟ್ರೋ ಶಂಕರ್ ನಾಗ್ ಎಂದು ನಾಮಕರಣ ಮಾಡಬೇಕು ಹಾಗೂ ಕಲಾವಿದರಿಗೆ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶಂಕರ್ ನಾಗ್ ಅಭಿಮಾನಿಗಳ ವೇದಿಕೆ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿ. ದುರ್ಗ ರಾಮಸ್ವಾಮಿ, ಡಾ. ರಾಜ್ ಕುಮಾರ್ ಕಲಾ ಪರಿಷತ್ತು ರಾಜ್ಯಾಧ್ಯಕ್ಷ ಪರಶುರಾಮ್ ಗೊರಪ್ಪರ್, ಹಾವೇರಿಯ ಮಂಜುಳಾ ಅಕ್ಕಿ, ರೈತ ಮುಖಂಡ ಕೆಸಿ. ಹೊರಕೇರಪ್ಪ, ಕಿರುತೆರೆ ನಟಿ ಇಂದ್ರಸುಧಾ, ಜೂನಿಯರ್ ರಾಜ್ ಕುಮಾರ್, ಬಾಬು, ಗಾಯಕಿ ಉಮಾ, ಸಿದ್ದೇಶ್, ಶ್ರೀನಿವಾಸ್, ಲಕ್ಷ್ಮಿಕಾಂತ್, ಮೋಹನ್, ಸಿದ್ದೇಶ್ವರ್, ರಂಗಸ್ವಾಮಿ ಮುಂತಾದವರು ಹಾಜರಿದ್ದರು.