ಕನ್ನಡಪ್ರಭ ವಾರ್ತೆ ಮಡಿಕೇರಿ

ಆದಿ ಶಂಕರಾಚಾರ್ಯರು 8 ನೇ ಶತಮಾನದಲ್ಲಿ ಜನಿಸಿ ರಾಷ್ಟ್ರದಲ್ಲಿ ಅದ್ವೈತ ವೇದಾಂತ ಸಿದ್ಧಾಂತದ ಪ್ರವರ್ತಕರಾಗಿ ಬೆಳಕು ಚೆಲ್ಲಿದ್ದಾರೆ ಎಂದು ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇರಳದ ಕಾಲಡಿಯಲ್ಲಿ ಶಿವಗುರು-ಆರ್ಯಾಂಬಾ ದಂಪತಿಯ ಪುತ್ರರಾಗಿ ಜನಿಸಿದ ಶಂಕರಾಚಾರ್ಯ ಅವರು, ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ವೇದ ಉಪ ನಿಷತ್ತುಗಳಿಗೆ ಭಾಷ್ಯ ಬರೆದು ರಾಷ್ಟ್ರಾದ್ಯಂತ ಸಂಚರಿಸಿ ಅದ್ವೈತ ತತ್ವವನ್ನು ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.ಶಂಕರಾಚಾರ್ಯರು 8ನೇ ವಯಸ್ಸಿನಲ್ಲಿಯೇ ವೇದಗಳನ್ನು ಅಧ್ಯಯನ ಮಾಡಿ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದರು. 8ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ಗೋವಿಂದ ಭಗವತ್ಪಾದರ ಬಳಿ ಶಿಷ್ಯರಾಗಿ ಬೆಳೆದರು ಎಂದು ಬಿ.ಜಿ.ಅನಂತಶಯನ ಅವರು ವಿವರಿಸಿದರು. ಚಿಂತಕ ಚಿ.ನಾ.ಸೋಮೇಶ್ ಮಾತನಾಡಿ, ಶ್ರೀ ಶಂಕರಾಚಾರ್ಯರು ಸಂತ ಪರಂಪರೆಯ ಮೌಲ್ಯಗಳನ್ನು ಪುನರುತ್ಥಾನಗೊಳಿಸುವಲ್ಲಿ ಮತ್ತು ಅದ್ವೈತ ವೇದಾಂತದ ಮೂಲಕ ಸನಾತನ ಧರ್ಮದ ಮಹತ್ವ ಸಾರುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆಗಳು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಇತಿಹಾಸದಲ್ಲಿ ಧ್ರುವನಕ್ಷತ್ರದಂತೆ ಎಂದು ವರ್ಣಿಸಿದರು.

ಶಂಕರರು ದಾರ್ಶನಿಕರು: ಶ್ರೀ ಶಂಕರಾಚಾರ್ಯರು ಅಕ್ಷರ ಜ್ಞಾನದಿಂದ ಎಲ್ಲವನ್ನು ಉಣಬಡಿಸಿದ್ದಾರೆ. ಅವರೊಬ್ಬ ದಾರ್ಶನಿಕರು, ತಮ್ಮ ಹಿರಿಮೆ, ಗರಿಮೆ, ಶ್ರೇಷ್ಠತೆ ಒಂದು ಚೌಕಟ್ಟಿನಲ್ಲಿ ನಿಲ್ಲಿಸಿದವರು, ತಮ್ಮ ಅದ್ವೈತ ಸಿದ್ಧಾಂತವನ್ನು ಪ್ರಸಾರ ಮಾಡಲು ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು (ಆಶ್ರಮ) ಸ್ಥಾಪಿಸಿದರು. ಇವರ ಜ್ಞಾನ ಸುಧೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಬಿ.ಕೆ.ಜಗದೀಶ್, ಎಸ್.ಎಸ್.ಸಂಪತ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಾದ ಆಶಾ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಸುನೀತ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶರಾದ ಕುಮಾರ ಸ್ವಾಗತಿಸಿದರು. ವಿದ್ವಾನ್ ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.