ಸಾರಾಂಶ
ಅತಿ ಕಿರಿಯ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆ ಮಾಡಿದ ಶ್ರೀ ಶಂಕರಾಚಾರ್ಯರು ಸಾಮಾನ್ಯ ಜನರ ಆತ್ಮೋದ್ಧಾರಕ್ಕಾಗಿ ವಿವಿಧ ದೇವ-ದೇವಿಯರ ಕುರಿತಾಗಿ ರಚಿಸಿದ ಸ್ತೋತ್ರಗಳು ಅತ್ಯಂತ ಸರಳ, ಸುಂದರ ಹಾಗೂ ಅನುಪಮವಾಗಿವೆ ಎಂದು ಶೃಂಗೇರಿಯ ವೇದ ವಿದ್ವಾಂಸ ಆದಿತ್ಯ ನಾವುಡ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಅತಿ ಕಿರಿಯ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆ ಮಾಡಿದ ಶ್ರೀ ಶಂಕರಾಚಾರ್ಯರು ಸಾಮಾನ್ಯ ಜನರ ಆತ್ಮೋದ್ಧಾರಕ್ಕಾಗಿ ವಿವಿಧ ದೇವ-ದೇವಿಯರ ಕುರಿತಾಗಿ ರಚಿಸಿದ ಸ್ತೋತ್ರಗಳು ಅತ್ಯಂತ ಸರಳ, ಸುಂದರ ಹಾಗೂ ಅನುಪಮವಾಗಿವೆ ಎಂದು ಶೃಂಗೇರಿಯ ವೇದ ವಿದ್ವಾಂಸ ಆದಿತ್ಯ ನಾವುಡ ಬಣ್ಣಿಸಿದರು.ಅವರು ಶೃಂಗೇರಿ ಜಗದ್ಗರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವಜ್ರಮಹೋತ್ಸವ ಅಂಗವಾಗಿ ತುಮಕೂರಿನ ಶೀ ಶಂಕರಮಠದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ, ಶ್ರೀ ಶಂಕರಸೇವಾ ಸಮಿತಿ ಹಾಗೂ ಶಂಕರ ತತ್ವ ಪ್ರಸಾರ ಅಭಿಯಾನದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಶಂಕರರ ಸ್ತೋತ್ರ ಸಾಹಿತ್ಯ ಕುರಿತಾದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಶಂಕರರು ಪಂಡಿತರಿಗೆ ಅನುಕೂಲವಾಗುವಂತೆ ಪ್ರೌಢ ಗ್ರಂಥಗಳ ರಚನೆಯ ಜೊತೆಗೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾದ ಶೈಲಿಯಲ್ಲಿ ಶಿವ, ವಿಷ್ಣು, ಗಣಪತಿ, ಷಣ್ಮುಖ, ದೇವಿಸ್ತುತಿ, ಲಿಂಗಾಷ್ಟಕಂ ಸೇರಿದಂತೆ ಅನೇಕ ದೇವತಾಸ್ತೋತ್ರಗಳನ್ನು ರಚಿಸಿದ್ದಾರೆ. ಭಜಗೋವಿಂದಂನಂತ ಸರಳ, ಸುಂದರ ಹಾಗೂ ಆಳವಾದ ತಾತ್ವಿಕ ಅರ್ಥವನ್ನು ಹೊಂದಿರುವ ಜನಪ್ರಿಯ ಸ್ತೋತ್ರವನ್ನೂ ಕೊಡುಗೆಯಾಗಿ ನೀಡಿದ್ದಾರೆ. ಆ ಮೂಲಕ ಸ್ತೋತ್ರ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಶಂಕರರು ಸದಾ ಪ್ರಾತಸ್ಮರಣೀಯರಾಗಿದ್ದಾರೆ ಎಂದು ಪ್ರತಿಪಾದಿಸಿದರು.ಮತ್ತೋರ್ವ ಉಪನ್ಯಾಸಕರಾಗಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ನಿತ್ಯ ಜೀವನದಲ್ಲಿ ಸ್ತೋತ್ರ ಪಾರಾಯಣ ಅತ್ಯಂತ ಅವಶ್ಯಕ. ಶಂಕರರು ರಚಿಸಿದ ಸ್ತೋತ್ರಗಳು ಭಕ್ತಿಯ ಜೊತೆಗೆ ಜೀವನದ ವಸ್ತುನಿಷ್ಠತೆ ಹಾಗೂ ವಿಷಯಾಸಕ್ತಿಯ ಮೇಲಿನ ನಿಯಂತ್ರಣದಂತಹ ತಾತ್ವಿಕ ವಿಷಯಗಳ ಬಗೆಗೂ ಮಾರ್ಗದರ್ಶನ ನೀಡುವಂತಿವೆ. ಜನಸಾಮಾನ್ಯರಿಗೂ ಅರ್ಥವಾಗುಂತೆ ಅತ್ಯಂತ ಸರಳವಾಗಿ, ಸುಂದರವಾಗಿ ಹಾಗೂ ಸುಲಭವಾಗಿ ಪ್ರತಿಪಾದಿಸಿದ್ದು, ಶಂಕರರ ಸ್ತೋತ್ರಗಳು ಅತ್ಯಂತ ಮೌಲಿಕ ಹಾಗೂ ಸಾರ್ವಕಾಲಿಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಹೆಬ್ಬಳಲು ಚಂದ್ರಶೇಖರ್, ರಾಜ್ಯ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಡಾ.ಎಚ್.ಹರೀಶ್, ಶಂಕರ ಸೇವಾಸಮಿತಿಯ ಚಿದಂಬರ ಜೋಷಿ, ನಾರಾಯಣ್ ಮತ್ತಿತರ ವಿಪ್ರ ಮುಖಂಡರು ಉಪಸ್ಥಿತರಿದ್ದರು. ಶಂಕರ ಸೇವಾಸಮಿತಿಯ ಕಾರ್ಯದರ್ಶಿ ಮಂಜುನಾಥ್ ಸ್ವಾಗತಿಸಿ, ವಂದಿಸಿದರು. ಶಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಎಂ.ಕೆ.ನಾಗರಾಜರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.;Resize=(128,128))
;Resize=(128,128))
;Resize=(128,128))