ಶಂಕರಾಚಾರ್ಯರು ಇಡೀ ವಿಶ್ವಕ್ಕೆ ಗುರು: ಸುರೇಶ್

| Published : May 14 2024, 01:06 AM IST

ಸಾರಾಂಶ

ನಗರದ ಶಂಕರಪುರ ಶ್ರೀರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ಆದಿಗುರು ಶಂಕರಾಚಾರ್ಯ ಜಯಂತಿ ಪೂಜಾ ಕಾರ್ಯಕ್ರಮ ಉಪನ್ಯಾಸ, ಅಭಿಷೇಕ, ಭಜನೆ, ಗಾಯನ, ಅಷ್ಟೋತ್ತರ ಪಾರಾಯಣ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಶಂಕರಪುರ ಶ್ರೀರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ಆದಿಗುರು ಶಂಕರಾಚಾರ್ಯ ಜಯಂತಿ ಪೂಜಾ ಕಾರ್ಯಕ್ರಮ ಉಪನ್ಯಾಸ, ಅಭಿಷೇಕ, ಭಜನೆ, ಗಾಯನ, ಅಷ್ಟೋತ್ತರ ಪಾರಾಯಣ ನಡೆಯಿತು. ಶ್ರೀ ಶಂಕರ ತತ್ವ ಪ್ರಚಾರ ಅಭಿಯಾನದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಆದಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಶಂಕರಾಚಾರ್ಯರು ಇಡೀ ವಿಶ್ವಕ್ಕೆ ಗುರು. ಭಕ್ತಿಯ ಮೂಲಕ ಸಾರ್ಥಕ ಜೀವನವನ್ನು ನಡೆಸಬೇಕು. ಗುರು ಪೂಜೆ ಗುರುದರ್ಶನ ಗುರು ಭಾವದಿಂದ ನಮ್ಮ ಜೀವನ ಸಾಗಲು ಅವಕಾಶ ಮಾಡಿಕೊಳ್ಳಬೇಕು. ದೇವಾಲಯಗಳು, ಮಂದಿರಗಳು, ಮಠಗಳು ಹಾಗೂ ವಿಶೇಷವಾಗಿ ಮನೆ ಮನೆಗಳಲ್ಲೂ ಶ್ರೀ ಶಂಕರರ ಜಯಂತಿ ಆಚರಣೆಯ ಮೂಲಕ ಆಧ್ಯಾತ್ಮಿಕ ಭಾವನೆ ಜಾಗೃತ ಮೂಡಿಸಿ ಭಕ್ತಿ ಪೂರ್ವಕವಾದ ಭಾವದೊಂದಿಗೆ ಜೀವನವನ್ನು ನಡೆಸಬೇಕು. ಶ್ರೀ ಶಂಕರರು ಇಡೀ ಜಗತ್ತಿಗೆ ದರ್ಶನವನ್ನು, ಜ್ಞಾನದ ಮಾರ್ಗವನ್ನು ನೀಡಿ ಮಾನವ ಜನ್ಮವನ್ನು ಸಾರ್ಥಕಗೊಳಿಸಿದ್ದಾರೆ ಎಂದು ತಿಳಿಸಿದರು.

ಶ್ರೀ ಶಾರದಾ ಭಜನಾ ಮಂಡಳಿಯ ಮಾಲಾ ಅವರು ಮಾತನಾಡಿ, ಸ್ತೋತ್ರ, ಪಠಣಗಳು, ಅಷ್ಟೋತ್ತರ, ಪಾರಾಯಣಗಳು ಗೀತ ಗಾಯನಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಶ್ರೀ ಶಂಕರಾಚಾರ್ಯ ವಿರಚಿತ ದೇವತಾ ಸ್ತೋತ್ರಗಳು ಮಾನವ ಕಲ್ಯಾಣದ ಅರ್ಥಗರ್ಭಿತವಾದ ವಿವರಗಳನ್ನು ನೀಡಿವೆ ಎಂದರು. ಪುರೋಹಿತರಾದ ರಂಗನಾಥ್ ಅವರು ಪೂಜಾ ಕಾರ್ಯವನ್ನು ನೆರವೇರಿಸಿದರು.

ಶಾರದಾ ಭಜನಾ ಮಂಡಳಿಯ ವತ್ಸಲ ರಾಜಗೋಪಾಲ್, ಕುಸುಮ ಋಗ್ವೇದಿ, ವಾಣಿಶ್ರೀ ಮುರುಗೇಶ್, ಶೈಲ ನಾಗೇಂದ್ರ, ಮಣಿ, ಸತ್ಯನಾರಾಯಣ ಮತ್ತಿತರರು ಭಾಗವಹಿಸಿದ್ದರು.