ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬ್ರಾಹ್ಮಣ ಸಮಾಜದವರು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ತಹಸೀಲ್ದಾರ್ ಧನಂಜಯ ಎಂ. ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಂಕರಾಚಾರ್ಯರು ಜಗತ್ತಿನ ಎಲ್ಲ ಸಮಾಜದವರನ್ನು ಕೂಡಿಕೊಂಡು ಹೋಗುವ ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಮಾಡಿ ಸಮಾನತೆಯ ತತ್ವ ಸಾರಿದ್ದರು.
ತಮ್ಮ ಆಳವಾದ ಅಧ್ಯಯನದಿಂದ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜ್ಞಾನ ಸಂಪಾದಿಸಿದ್ದ ಶ್ರೀಗಳ ಕೊಡುಗೆಗಳು ಭಾರತದ ಆಧ್ಯಾತ್ಮಿಕ ಮತ್ತು ತಾತ್ವಿಕವಾಗಿ ಜಗತ್ತಿನ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ. ಅಂತಹ ಮಹಾನ ಶ್ರೇಷ್ಠರನ್ನು ಒಂದೇ ಜಾತಿಗೆ ಸೀಮಿತಗೊಳಿಸುವುದು ಬೇಡ. ಎಲ್ಲ ಜಾತಿ, ಧರ್ಮದವರಿಗೂ ಅವರು ನೀಡಿದ ಕೊಡುಗೆಗೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ಶಂಕರಾಚಾರ್ಯರು ಎಲ್ಲ ಜಾತಿ, ಧರ್ಮಗಳು ಒಂದೇ ಎನ್ನುವ ನಿಟ್ಟಿನಲ್ಲಿ ಧರ್ಮ ಪ್ರಚಾರ ಮಾಡಿದರು. ಅದರಂತೆ ಲಿಂ.ಜ. ವೀರಗಂಗಾಧರ ಭಗವತ್ಪಾದರು ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಮೂಲಕ ಎಲ್ಲ ಧರ್ಮಗಳ ಸಾರವನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಾಡಿದರು. ಬಸವಣ್ಣನವರು ಜಾತಿ ಜಾತಿಗಳ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಇಂತಹ ಅನೇಕ ಯುಗಪುರುಷರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಅರವಿಂದ ದೇಶಪಾಂಡೆ, ಬಿ.ಕೆ. ಕುಲಕರ್ಣಿ, ಧ್ರುವರಾಜ ಬೆಟಗೇರಿ, ಸಾಹುಕಾರ, ರಾಘವೇಂದ್ರ ಪೂಜಾರ, ದಿಗಂಬರ ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಡಿ.ಪಿ. ಹೇಮಾದ್ರಿ, ಗುರುರಾಜ ಪಾಟೀಲಕುಲಕರ್ಣಿ, ಎಸ್.ಬಿ. ಅಣ್ಣಿಗೇರಿ, ಪ್ರಶಾಂತ ಕಿಮಾಯಿ, ರೇಣುಕಾ ಶಿರಹಟ್ಟಿ, ಪ್ರಶಾಂತ ಸನದಿ, ನಿರ್ಮಲಾ ಹಾಗೂ ಕಚೇರಿ ಸಿಬ್ಬಂದಿ, ಸಮಾಜದವರು ಪಾಲ್ಗೊಂಡಿದ್ದರು.