ಭಾರತೀಯ ಸಂಸ್ಕೃತಿ ಗಟ್ಟಿಗೊಳಿಸಿದ ಶಂಕರಾಚಾರ್ಯರು

| Published : May 02 2025, 11:45 PM IST

ಸಾರಾಂಶ

ವೇದ, ಉಪನಿಷತ್ತುಗಳ ಮೇಲಿನ ನಂಬಿಕೆ ಕುಸಿದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ದಾರಿ ತಪ್ಪುವ ಸಂದರ್ಭದಲ್ಲಿ ತಮ್ಮ ಅದ್ವೈತ ಸಿದ್ಧಾಂತ, ಕರ್ಮಯೋಗದ ಮೂಲಕ ಭಾರತೀಯತೆಯನ್ನು ಸರಿದಾರಿಗೆ ತಂದ ಯುಗ ಪ್ರವರ್ತಕ ಶಂಕರಾಚಾರ್ಯರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುವೇದ, ಉಪನಿಷತ್ತುಗಳ ಮೇಲಿನ ನಂಬಿಕೆ ಕುಸಿದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ದಾರಿ ತಪ್ಪುವ ಸಂದರ್ಭದಲ್ಲಿ ತಮ್ಮ ಅದ್ವೈತ ಸಿದ್ಧಾಂತ, ಕರ್ಮಯೋಗದ ಮೂಲಕ ಭಾರತೀಯತೆಯನ್ನು ಸರಿದಾರಿಗೆ ತಂದ ಯುಗ ಪ್ರವರ್ತಕ ಶಂಕರಾಚಾರ್ಯರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು. ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಶಂಕರ ಸೇವಾ ಸಮಿತಿ ಮತ್ತು ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ದಾರಿ ತಪ್ಪುತ್ತಿದ್ದ ಭಾರತೀಯತೆಯಲ್ಲಿ ಬದಲಾವಣೆ ತಂದ ಪ್ರವರ್ತಕರು ಶ್ರೀ ಶಂಕರಾಚಾರ್ಯರು ಎಂದರು.ಶಂಕರಾಚಾರ್ಯರಗಿಂತ ಮೊದಲು ಇದ್ದ ಅನೇಕರು ಈ ದೇಶದ ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಚಾರ್ವಕರ ನಂತರ ಹಳಿ ತಪ್ಪಿದ್ದ ಭಾರತದ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಪರಂಪರೆಯನ್ನು ಸರಿದಾರಿಗೆ ತರಲು ತಮ್ಮ ಜೀವಿತದ ಅವಧಿಯಲ್ಲಿ ಜನಪರ ಆಲೋಚನೆ, ಆಚರಣೆಗಳ ಮೂಲಕ ಧರ್ಮ ಸಂರಕ್ಷಣೆಗೆ ಭದ್ರ ಬುನಾದಿ ಹಾಕಿದವರು ಶಂಕರಾಚಾರ್ಯರು ಎಂದರು.ಧರ್ಮ ಸಂರಕ್ಷಣೆಗಾಗಿ ಇಡೀ ಭಾರತವನ್ನು ಸುತ್ತಿ, ನಾಲ್ಕು ದಿಕ್ಕುಗಳಲ್ಲಿಯೂ ಮಠಗಳನ್ನು ಸ್ಥಾಪಿಸಿ, ಅವುಗಳ ಮೂಲಕ ಧರ್ಮ ಜಾಗೃತಿಯಲ್ಲಿ ತೊಡಗಿದರು. ಸರ್ವೋ ಜನೋ ಸುಖಿಃನೋ ಭವಂತು ಎಂಬ ನುಡಿಯ ಮೂಲಕ ಇಡೀ ವಿಶ್ವವೇ ನೆಮ್ಮದಿಯಿಂದ ಬದುಕಬೇಕು ಎಂಬುದು ಶಂಕರಾಚಾರ್ಯರ ಸಿದ್ಧಾಂತವಾಗಿತ್ತು ಎಂದು ನುಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ, ಅಖಂಡ ಪಾಂಡಿತ್ಯದ ಮೂಲಕ ಜ್ಞಾನ ಸಾಧನೆ ಮಾಡಿದ ಶಂಕರಾಚಾರ್ಯರು, ಬ್ರಹ್ಮ ಸಾಕ್ಷಾತ್ಕಾರ ಪಡೆದು, ಅತೀಂದ್ರೀಯ ಶಕ್ತಿಯ ನಿಗ್ರಹದ ಮೂಲಕ ಜನರಿಗೆ ಅರಿವು, ಜ್ಞಾನವನ್ನು ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಂಕರ ತತ್ವ ಪ್ರಚಾರಕ ಎಂ.ಎನ್.ನಾಗರಾಜರಾವ್, ಭಾರತವು ತತ್ವಜ್ಞಾನಿಗಳ ತವರು. ಪ್ರಪಂಚದ ಇತರೆ ದೇಶಗಳು ಕಣ್ಣು ಬಿಡುವ ಮೊದಲೇ ಭಾರತ ಖಂಡ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಶಂಕರಾಚಾರ್ಯರು ವೈದಿಕ ಪರಂಪರೆಗೆ ನೀಡಿದ ಕೊಡುಗೆ ಅಪಾರ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಕಾಯಕದ ಅವಶ್ಯಕತೆಯನ್ನು ಒತ್ತಿ ಹೇಳಿದ ಶಂಕರರು, ಸಂಪಾದನೆ ಸರಿಯಾದ ಮಾರ್ಗದಲ್ಲಿ ಇರಬೇಕು ಎಂಬುದರ ಜೊತೆಗೆ, ನನ್ನ ಜನ್ಮ ಭೂಮಿಗಿಂತ ಮೀಗಿಲಾದುದ್ದು ಮತ್ತೊಂದಿಲ್ಲ ಎಂದು ಹೇಳುವ ರಾಷ್ಟ್ರಪ್ರೇಮವನ್ನು ಜನರಲ್ಲಿ ಬಿತ್ತಿದರು ಎಂದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಎಚ್.ಜಿ.ಚಂದ್ರಶೇಖರ್, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಉಪಾಧ್ಯಕ್ಷ ಹರೀಶ್, ಶ್ರೀ ಶಂಕರ ಸೇವಾ ಸಮಿತಿಯ ಉಪಾಧ್ಯಕ್ಷ ಎಚ್.ಕೆ.ರಮೇಶ್, ಕಾರ್ಯದರ್ಶಿ ಟಿ.ಎಸ್. ಮಂಜುನಾಥ್, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾದ ಪ್ರಧಾನ ಕಾರ್ಯದರ್ಶಿ ಸುರೇಶಹೊಳ್ಳ, ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರತಿನಿಧಿ ಡಾ. ಎಚ್.ಹರೀಶ್, ಮಾಧ್ವ ಮಹಾಮಂಡಲದ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್, ಮಾಜಿ ಕಾರ್ಪೋರೇಟರ್ ಎಚ್.ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.