ಶಾಂತಳ್ಳಿ ಶಾಲೆ ಶತಮಾನೋತ್ಸವ: ಬೃಹತ್ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

| Published : Apr 05 2025, 12:45 AM IST

ಸಾರಾಂಶ

ಶಾಂತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಬೃಹತ್ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಮೂಲಕ ಶುಕ್ರವಾರ ಚಾಲನೆ ನೀಡಲಾಯಿತು.

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಕೃಷ್ಣಮೂರ್ತಿ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಶಾಂತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಬೃಹತ್ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಮೂಲಕ ಶುಕ್ರವಾರ ಚಾಲನೆ ನೀಡಲಾಯಿತು.

ಶಿಬಿರಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ ಚಾಲನೆ ನೀಡಿ ಮಾತನಾಡಿ, ಪ್ರತಿಯೋರ್ವರೂ ಕಾಲಕಾಲಕ್ಕೆ ತಮ್ಮ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿಕೊಳ್ಳಬೇಕು. ಶಾಂತಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂದರ್ಭ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಇದರೊಂದಿಗೆ ರಕ್ತದಾನದ ಮೂಲಕ ಮತ್ತೊಂದು ಜೀವ ಉಳಿಸುವ ಮಹತ್ಕಾರ್ಯವನ್ನೂ ಹಮ್ಮಿಕೊಂಡಿರುವುದು ಸಾಮಾಜಿಕ ಕಳಕಳಿಯ ಧ್ಯೋತಕ ಎಂದು ಬಣ್ಣಿಸಿದರು.

ಮುಖ್ಯ ಅತಿಥಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇದ್ದರೂ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಸ್ಥಳೀಯ ಪೋಷಕರು ಶಾಲೆಗಳ ಉಳಿವಿಗೆ ಕೈಜೋಡಿಸಬೇಕು. ಶಾಂತಳ್ಳಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದರೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿದ್ದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಧನಂಜಯ್ ಮೇದಪ್ಪ ಮಾತನಾಡಿ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ರೋಗಗಳ ತ್ವರಿತ ಪತ್ತೆ ಮತ್ತು ಮುಂಜಾಗ್ರತೆಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಾಂತಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅಧ್ಯಕ್ಷತೆವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಮಡಿಕೇರಿ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಖಜಾಂಚಿ ರಾಜಶೇಖರ್, ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ್, ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಉಪ ತಹಸೀಲ್ದಾರ್ ತುಕ್ರಪ್ಪ ಮೇರ, ಕಂದಾಯಾಧಿಕಾರಿ ದಾಮೋಧರ್, ಪಿಡಿಒ ವೇಣುಗೋಪಾಲ್, ಗ್ರಾಮಾಧ್ಯಕ್ಷ ಜಿ.ಡಿ. ಬಸವರಾಜು, ಯುವಕ ಸಂಘ ಅಧ್ಯಕ್ಷ ಸಜನ್ ಮಂದಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರಾದ ಚೇತನ್, ಜೀವಿತಾ, ರವಿಚಂದ್ರ, ನಳಿನ, ಧನಂಜಯ್ ಮೇದಪ್ಪ, ಎನ್. ಅಮೂಲ್ಯ, ಲೋಹಿತ್, ಶಮಿತ್, ನಚಿಕೇತ್, ಫೆಬಿ ಕರೀಮ್, ಶ್ವೇತಾ, ಸುಹಾಸ್ ರಾವ್, ಮಹೇಶ್, ಜ್ಯೋತಿ, ಲೈಲಾ, ಮಹಾಂತೇಶ್, ಸಮೀರ್, ವಿನಾಯಕ್, ನಿಹಾರಿಕಾ, ಐಶ್ವರ್ಯ, ಹರಿನಾರಾಯಣ್, ರಮೇಶ್, ವಿವಿಧ ವಿಭಾಗಗಳ ಸಿಬ್ಬಂದಿ ಕಾವ್ಯ, ಸುನಿತ, ಅಪ್ಪಯ್ಯ, ಜನ್ಯ, ಸಂಪತ್ ಕುಮಾರ್, ದಿಲೀಪ್, ಕಪಾಲಿ, ತೇಜಸ್, ಅಕ್ಷಯ್ ಶಿಬಿರಕ್ಕೆ ಆಗಮಿಸಿ ಆರೋಗ್ಯ ಸೇವೆ ಒದಗಿಸಿದರು.

ಶಿಬಿರದಲ್ಲಿ ಒಟ್ಟು ೩೬೫ ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸೂಕ್ತ ಸಲಹೆ ಪಡೆದರು. ೩೪ ಮಂದಿ ರಕ್ತದಾನ ಮಾಡಿದರು.

ಇದೇ ಸಂದರ್ಭ ಶಾಲೆಯ ಹಿರಿಯ ಶಿಕ್ಷಕರು, ಸಾಧಕರು, ವೈದ್ಯರನ್ನು ಶತಮಾನೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.