ಸಾಹಿತ್ಯಿಕ ಸಿದ್ಧಿಯಿಂದ ಶಿಷ್ಯರ ಸಮೂಹ ಕಟ್ಟಿದ ಶಾಂತವೀರ ಶ್ರೀ

| Published : Jul 26 2025, 12:00 AM IST

ಸಾಹಿತ್ಯಿಕ ಸಿದ್ಧಿಯಿಂದ ಶಿಷ್ಯರ ಸಮೂಹ ಕಟ್ಟಿದ ಶಾಂತವೀರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಮುರಿಗೆ ಶಾಂತವೀರ ಮುರುಘರಾಜೇಂದ್ರ ಶ್ರೀಗಳ ಲೀಲಾ ವಿಶ್ರಾಂತಿ ಸ್ಥಾನದ ಗದ್ದುಗೆಯಲ್ಲಿಂದು ವಚನಾಭಿಷೇಕ ಹಾಗೂ ಮುರಿಗಾ ಪರಂಪರೆಯಲ್ಲಿ ಸಾಗಿಬಂದ ಗುರುಪರಂಪರೆಯ ಜೀವನದರ್ಶನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಆಧ್ಯಾತ್ಮ, ಸಾಹಿತ್ಯಿಕ ಸಿದ್ಧಿಯಿಂದ ಶಿಷ್ಯರ ಸಮೂಹ ಕಟ್ಟಿದ ಕೀರ್ತಿ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿಗೆ ಸಲ್ಲುತ್ತದೆ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರು ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೆ.ಎಂ.ವೀರೇಶ್ ಹೇಳಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸ್ಥಾನದ ಗದ್ದುಗೆಯಲ್ಲಿ ಶುಕ್ರವಾರ ನಡೆದ ವಚನಾಭಿಷೇಕ ಹಾಗೂ ಮುರಿಗಾ ಪರಂಪರೆಯಲ್ಲಿ ಸಾಗಿಬಂದ ಗುರುಪರಂಪರೆಯ ಮಹಾಸ್ವಾಮೀಜಿ ಜೀವನ ದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಐತಿಹಾಸಿಕ ಚಿತ್ರದುರ್ಗಕ್ಕೆ ಕಳಶ ಪ್ರಾಯವಾದ ಇಲ್ಲಿನ ಚಿನ್ಮೂಲಾದ್ರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು, ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಅವರಿಂದ ಪ್ರಾರಂಭವಾದ ಬಗ್ಗೆ ಇತಿಹಾಸಕಾರರು ಹೇಳುತ್ತಾರೆ.

ಈ ಪೀಠ ಸ್ಥಾಪನೆಯ ಬಗ್ಗೆ ಐತಿಹಾಸಿಕ ಮಹತ್ವವಿದೆ. ದನಗಾಹಿ ಹುಡುಗನೊಬ್ಬ ದುರ್ಗದ ದೊರೆಯಾಗುವುದಕ್ಕೆ ಮುರಿಗೆಯ ಶಾಂತವೀರರ ಆಶೀರ್ವಾದದ ಬಲವೇ ಕಾರಣ. ಮುಂದೆ ಆ ಹುಡುಗ ದುರ್ಗದ ದೊರೆ ಭರಮಣ್ಣ ನಾಯಕನಾದುದು ಆಶೀರ್ವದಿಸಿದ ಗುರುಗಳಿಗೆ ಮಠ ಕಟ್ಟಿದ ಪ್ರಸಂಗಗಳು ಸ್ಮರಣೀಯ ಎಂದರು.

ಶಾಂತವೀರರು ಪ್ರಕಾಂಡ ಪಂಡಿತರು, ಪುರಾಣ ಆಗಮ ವೇದಶಾಸ್ತ್ರ ನಿಪುಣರು, ಸಂಗೀತದೆಡೆಗೆ ಅವರಲ್ಲಿದ್ದ ಅಪಾರ ಪ್ರೀತಿ, ರಾಜರ ಆಸ್ಥಾನಗಳಲ್ಲಿ ಪ್ರತಿವಾದಿಗಳನ್ನು ಸೋಲಿಸುತ್ತಿದ್ದ ಪರಿ, ಹೇಳಿದ ಹಾಡನ್ನು ವಚನವನ್ನು ಪುನರುಚ್ಚರಿಸದೇ ಒಂದು ತಿಂಗಳವರೆಗೆ ಹಾಡಬಲ್ಲವರಾಗಿದ್ದ ಪ್ರೌಢಿಮೆ, ವಿವಿಧ ರಾಗಗಳ ಮೂಲಕ ಹಾಡಿ ಗಮಕಿಗಳ ತಲೆರೆನ್ನ ಎಂದು ಖ್ಯಾತರಾಗಿದ್ದರು. ಕಾವ್ಯ ಪ್ರವೀಣರು. 17ನೇ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕ ಲಿಂಗಾಯತ ವೀರಶೈವ ಧರ್ಮದ ಪುನರುತ್ಥಾನಕ್ಕೆ ಕಾರಣ ಪುರುಷರಾಗಿದ್ದಾರೆಂದರೆ ತಪ್ಪಾಗಲಾರದು ಎಂದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಮುರುಘಾ ಪರಂಪರೆಯ ಸ್ವಾಮೀಜಿಗಳಲ್ಲಿ ಮುರಿಗೆಯ ಶಾಂತವೀರರ ಐತಿಹ್ಯದ ಬಗ್ಗೆ ಲಾವಣಿ, ತಾರಾವಳಿ, ಜನಪದರು ಕಟ್ಟಿರುವ ಹಾಡುಗಳಲ್ಲಿ ಹಾಗೆಯೇ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕರ ಇತಿಹಾಸದ ಜತೆಗೆ ಶ್ರೀಗಳ ಚಾರಿತ್ರಿಕ ಘಟನೆಗಳು ಬರುತ್ತವೆ. ಶಾಂತವೀರ ಮಹಾಕರ್ತೃಗಳು ಗುರು-ವಿರಕ್ತ ಪರಂಪರೆ ಯಾಚೆಗಿನ ಭಕ್ತವರ್ಗ ಪರಂಪರೆಯನ್ನು ಕಟ್ಟ ಬಯಸಿ ಆ ಮೂಲಕ ಶ್ರೇಷ್ಠತೆ ಮೆರೆದರು ಎಂದು ಹೇಳಿದರು.

ನಮ್ಮಲ್ಲಿನ್ನೂ ಗುರು-ವಿರಕ್ತರೆನ್ನುವ ದ್ವಂದ್ವದ ತಾಕಲಾಟಗಳಿವೆ. ಅವರು ಶ್ರೇಷ್ಠ ಇವರು ಕನಿಷ್ಠ ಎನ್ನುತ್ತ ಮಹಾತ್ಮರ ವಿಚಾರ, ಅವರು ನಡೆದುಬಂದ ದಾರಿಯ ಅವಲೋಕನ ಮಾಡದೆ ಅವರನ್ನು ಕಳೆದುಕೊಳ್ಳುತ್ತಿದ್ದೇವೆನೋ ಎಂಬ ಆತಂಕದಲ್ಲಿ ದಲ್ಲಿದ್ದೇವೆ. ನಮ್ಮ ಅಂತರಂಗದಲ್ಲಿ ಯಾರಿಗೆ ಎಷ್ಟು ಮೌಲ್ಯ ಕೊಡಬೇಕೆನ್ನುವ ಆಲೋಚನೆ ಅಗತ್ಯ. ನಾವು ಕರ್ತೃ ಮುರುಘೇಶನ ಜಾಗೃತ ಸ್ಥಾನದಲ್ಲಿ ಮಾತನಾಡುವಾಗ ಜಾಗೃತಿಯಿಂದ ಮಾತನಾಡಬೇಕಿದೆ ಎಂದರು.

ಈ ವೇಳೆ ವಚನಾಭಿಷೇಕದ ಸೇವಾ ಕರ್ತರಾದ ಗುತ್ತಿನಾಡಿನ ರೈತ ಮುಖಂಡರು, ವೀರಶೈವ ಸಮಾಜದ ನಿರ್ದೇಶಕರೂ ಆದ ಪ್ರಕಾಶ್ ದಂಪತಿ ಸೇರಿ ಮುರುಘಾಮಠದ ಸಾಧಕ ಸ್ವಾಮೀಜಿ ಮುರುಘೇಂದ್ರ ಸ್ವಾಮೀಜಿ ಹಾಗೂ ನಗರದ ಗಣ್ಯರು, ಎಸ್‌ಜೆಎಂ ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.