ಸಾರಾಂಶ
ಹರಪನಹಳ್ಳಿ: ಪಟ್ಟಣದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ್) ಬ್ಯಾಂಕಿನ ನೂತನ ಅಧ್ಯಕ್ಷರಾಗಿ ರೆಡ್ಡಿ ಶಾಂತಕುಮಾರ ಆಯ್ಕೆಯಾಗಿದ್ದಾರೆ.
ಪಿ.ಬಿ. ಗೌಡ್ರು ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರೆಡ್ಡಿ ಶಾಂತಕುಮಾರ ಮತ್ತು ಆರ್.ಶಿವಕುಮಾರಗೌಡ ನಾಮಪತ್ರ ಸಲ್ಲಿಸಿದ್ದರು. ಬ್ಯಾಂಕಿನ ಒಟ್ಟು 15 ನಿರ್ದೇಶಕರ ಪೈಕಿ 14 ಜನರು ಇದ್ದರು. ಒಬ್ಬರು ಮಾತ್ರ ಗೈರಾಗಿದ್ದರು. ರೆಡ್ಡಿ ಶಾಂತಕುಮಾರ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಆರ್.ಶಿವಕುಮಾರಗೌಡ 5 ಮತಗಳನ್ನು ಪಡೆದು ಪರಾಭವಗೊಂಡರು.ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಸುರೇಂದ್ರ ಕಾರ್ಯ ನಿರ್ವಹಿಸಿದರು.
ಪಿಕಾರ್ಡ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೆಡ್ಡಿ ಶಾಂತಕುಮಾರ ಅವರಿಗೆ ಬ್ಯಾಂಕಿನ ನಿರ್ದೇಶಕರು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಶಾಲು-ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.ಈ ವೇಳೆ ನೂತನ ಅಧ್ಯಕ್ಷ ರೆಡ್ಡಿ ಶಾಂತಕುಮಾರ ಮಾತನಾಡಿ, ನನ್ನ ಅವಧಿಯಲ್ಲಿ ರೈತರ ಪರವಾಗಿ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಬ್ಯಾಂಕಿನ ಸರ್ವ ಸದಸ್ಯರ ವಿಶ್ವಾಸ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಪಿಕಾರ್ಡ್ ಬ್ಯಾಂಕ್ ಜಿಲ್ಲೆಯಲ್ಲಿ ವ್ಯವಹಾರಿಕವಾಗಿ ಪ್ರಥಮ ಸ್ಥಾನದಲ್ಲಿದ್ದು, ರೈತರು ಸಹ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡುತ್ತಾ ಬಂದಿರುವುದು ಬ್ಯಾಂಕಿನ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಬಂದಿದೆ ಇದೇ ರೀತಿ ಕ್ಷೇತ್ರದ ಶಾಸಕರ ಸಹಕಾರ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವಂತೆ ಬ್ಯಾಂಕಿನ ನಿರ್ದೇಶಕರಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ರಾಜಕುಮಾರ, ನಿರ್ದೇಶಕರಾದ ಲಾಟಿ ದಾದಪೀರ್, ಎಸ್.ಜಂಬಣ್ಣ, ಬೇಲೂರು ಸಿದ್ದೇಶ, ಟಿ.ಜಗದೀಶ, ಮಹಾದೇವಪ್ಪ, ಬಸವರಾಜಪ್ಪ, ಎಚ್.ಸುಮಂಗಲ, ಎಚ್.ವಿಶಾಲಕ್ಷಮ್ಮ, ವೀರಪ್ಪ, ಭೀಮಪ್ಪ, ಪುರಸಭೆ ಸದಸ್ಯರಾದ ಗಣೇಶ, ಜೋಗಿನ್ನರ ಭರತೇಶ್, ಮುಖಂಡರಾದ ತೆಲಗಿ ಈಶಪ್ಪ, ವಸಂತಪ್ಪ, ಚಿಕ್ಕೇರಿ ಬಸಪ್ಪ, ಹುಲಿಕಟ್ಟಿ ಚಂದ್ರಪ್ಪ, ಪಿ.ಪ್ರೇಮಕುಮಾರ, ಅಲರಸಿಕೇರಿ ಪರಶುರಾಮ ಸುನೀಲ ಕುಮಾರ ಬಿದ್ರಿ, ಪ್ರದೀಪ್ ಸೇರಿದಂತೆ ಇತರರು ಇದ್ದರು.