ಲಂಬಾಣಿ ಕಸೂತಿ ಕಲೆ ವಿಶ್ವಕ್ಕೆ ಪಸರಿಸಿದ ಶಾಂತಿಬಾಯಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

| Published : Oct 31 2025, 02:30 AM IST

ಲಂಬಾಣಿ ಕಸೂತಿ ಕಲೆ ವಿಶ್ವಕ್ಕೆ ಪಸರಿಸಿದ ಶಾಂತಿಬಾಯಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಿನ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಶಾಂತಿಬಾಯಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ವಿ.ಎಂ. ನಾಗಭೂಷಣ

ಸಂಡೂರು: ಪಟ್ಟಣದ ಸಂಡೂರು ಕುಶಲ ಕಲಾ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್ ಪರ್ಸನ್ ಆಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಲಂಬಾಣಿ ಕಸೂತಿ ಕಲೆಯಲ್ಲಿ ಅಪಾರವಾದ ಸಾಧನೆ ಮಾಡಿರುವ ತಾಲೂಕಿನ ಸುಶೀಲಾನಗರದ ಶಾಂತಿಬಾಯಿ ಕೆ. ಅವರು ಸಂಕೀರ್ಣ ವಿಭಾಗದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇವರಲ್ಲಿನ ಬಂಜಾರ ಕಲೆಯನ್ನು ಗುರುತಿಸಿ ಕೇಂದ್ರದ ಜವಳಿ ಸಚಿವಾಲಯ ಇವರನ್ನು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿತು. ೨೦೦೨ರಲ್ಲಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಶಾಂತಿಬಾಯಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

೨೦೧೪ರಲ್ಲಿ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ಅವರಿಗೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಕಸೂತಿ ಕಲೆ ಪ್ರದರ್ಶನ:

ಶಾಂತಿಬಾಯಿ ಕೆ. ಅವರು ತಾವು ಕೆಲಸ ನಿರ್ವಹಿಸುತ್ತಿರುವ ಸಂಡೂರು ಕುಶಲ ಕಲಾ ಕೇಂದ್ರವನ್ನು ಪ್ರತಿನಿಧಿಸಿ, ಅವರ ಕಸೂತಿ ಮತ್ತಿತರ ಉತ್ಪನ್ನಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಲ್ಲದೆ, ಸ್ವೀಡನ್, ಸ್ಪೇನ್, ಸಿಂಗಾಪೂರ, ಚೈನಾ, ಸ್ವಿಟ್ಜರ್‌ಲ್ಯಾಂಡ್, ಅಮೆರಿಕ ಹಾಗೂ ಇಟಲಿ ದೇಶಗಳಲ್ಲಿ ನಡೆದ ಕರ ಕುಶಲ ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶಿಸಿ, ಸಂಸ್ಥೆಯ ಹೆಸರನ್ನು ಹಾಗೂ ಲಂಬಾಣಿ ಕಸೂತಿ ಕಲೆಯ ಸೊಬಗನ್ನು ಪ್ರಪಂಚದ ವಿವಿಧ ಮೂಲೆಗಳಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೌಟುಂಬಿಕ ಹಿನ್ನೆಲೆ:

ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ೧೯೭೪ರಲ್ಲಿ ಕಲ್ಲಳ್ಳಿ ಪರ‍್ಯಾನಾಯ್ಕ್ ಹಾಗೂ ಸೀತಾಬಾಯಿ ಅವರ ೬ ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಶಾಂತಿಬಾಯಿ ಕೆ. ಅವರು ಓದಿದ್ದು ಕೇವಲ ೩ನೇ ತರಗತಿಯವರೆಗೆ ಮಾತ್ರ. ೧೮ನೇ ವಯಸ್ಸಿಗೆ ಮದುವೆ. ಒಬ್ಬ ಮಗ ಜನಿಸಿದ ನಂತರ ಇವರ ಪತಿ ಅವರನ್ನು ತೊರೆದು ಇನ್ನೊಂದು ಮದುವೆಯಾದಾಗ, ಮಗನ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು.

ಸಂಡೂರಿನಲ್ಲಿನ ಸಂಡೂರು ಕುಶಲ ಕಲಾ ಕೇಂದ್ರದಲ್ಲಿ ಕಸೂತಿ ಕಲೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ. ವಂಶ ಪಾರಂಪರ‍್ಯವಾಗಿ ಲಂಬಾಣಿ ಕಸೂತಿ ಕಲೆಯನ್ನು ಕಲಿತಿದ್ದರೂ ಅದಕ್ಕೆ ಆಧುನಿಕ ಸ್ಪರ್ಶ ನೀಡಿ, ಈ ಕಲೆಯನ್ನು ಹೆಚ್ಚು ಪ್ರಸಿದ್ಧಿಗೆ ತರಲು ನೆರವಾಗಿದ್ದು ಸಂಡೂರು ಕುಶಲ ಕಲಾ ಕೇಂದ್ರ.

ಸಂಸ್ಥೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ೨೪ ಲಂಬಾಣಿ ತಾಂಡಗಳಲ್ಲಿನ ಕೇಂದ್ರಗಳಲ್ಲಿನ ಮಹಿಳೆಯರಿಗೆ ಲಂಬಾಣಿ ಕಸೂತಿ ಕಲೆಯ ಕುರಿತು ತರಬೇತು ನೀಡುತ್ತಿದ್ದಾರೆ.

ನನ್ನ ವೃತ್ತಿ ಬದುಕಿನ ಏಳ್ಗೆಗೆ, ಸಾಧನೆಗೆ ಸಂಡೂರು ಕುಶಲಕಲಾ ಕೇಂದ್ರವೇ ಕಾರಣ. ಆಸಕ್ತಿ ಇರುವವರಿಗೆ ಈ ಕಲೆಯನ್ನು ಕಲಿಸಿ, ಇನ್ನು ಉತ್ತಮ ಮಟ್ಟದಲ್ಲಿ ಪ್ರಚುರ ಪಡಿಸಬೇಕೆಂಬ ಆಸೆ ಇದೆ ಎನ್ನುತ್ತಾರೆ ಶಾಂತಿಬಾಯಿ ಕೆ.