ಸಾರಾಂಶ
ಚನ್ನಗಿರಿ ತಾಲೂಕು ಶಾಂತಿಸಾಗರ - ಮಾವಿನಕಟ್ಟೆ ವಲಯದಲ್ಲಿ 250-300 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಸಮಗ್ರ ತನಿಖೆ ಕೈಗೊಂಡು, ಒತ್ತುವರಿ ತೆರವುಗೊಳಿಸದ ಭದ್ರಾವತಿಯ ಆರ್‌ಎಫ್‌ಓ, ಎಸಿಎಫ್, ಡಿಸಿಎಫ್ ಅನ್ನು ತಕ್ಷಣವೇ ಅಮಾನತುಗೊಳಿಸುವಂತೆ ವಕೀಲ ಜಿ.ಆರ್. ಷಡಕ್ಷರಪ್ಪ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಚನ್ನಗಿರಿ ತಾಲೂಕು ಶಾಂತಿಸಾಗರ - ಮಾವಿನಕಟ್ಟೆ ವಲಯದಲ್ಲಿ 250-300 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಸಮಗ್ರ ತನಿಖೆ ಕೈಗೊಂಡು, ಒತ್ತುವರಿ ತೆರವುಗೊಳಿಸದ ಭದ್ರಾವತಿಯ ಆರ್‌ಎಫ್‌ಓ, ಎಸಿಎಫ್, ಡಿಸಿಎಫ್ ಅನ್ನು ತಕ್ಷಣವೇ ಅಮಾನತುಗೊಳಿಸುವಂತೆ ವಕೀಲ ಜಿ.ಆರ್. ಷಡಕ್ಷರಪ್ಪ ಒತ್ತಾಯಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲೂಕಿನಲ್ಲಿ 250-300 ಎಕರೆ ಅರಣ್ಯ ಪ್ರದೇಶ, ಗುಡ್ಡ ಪ್ರದೇಶ ಒತ್ತುವರಿಯಾದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೇ, ಅಸಡ್ಡೆ ತೋರುತ್ತಿದ್ದಾರೆ. ತಕ್ಷಣವೇ ಈ ಮೂವರೂ ಅಧಿಕಾರಿಗಳನ್ನು ಅಮಾನತುಪಡಿಸಿ, ತನಿಖೆಗೊಳಪಡಿಸಬೇಕು ಎಂದರು. ಕೋಟ್ಯಾಂತರ ರು. ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿಯಾಗಿದ್ದರೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ 15 ಎಕರೆ ಮಾತ್ರ ಒತ್ತುವರಿಯಾಗಿದೆಯೆಂಬ ವರದಿ ನೀಡಿದ್ದಾರೆ. ಸರ್ಕಾರವೇ ಒತ್ತುವರಿಯಾಗಿದ್ದನ್ನು ಒಪ್ಪಿಕೊಂಡಂತಾಗಿದೆ. ತಕ್ಷಣವೇ ಈ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಳೆದೊಂದು ವರ್ಷದಿಂದ 250-300 ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಲಾಗಿದೆ. ಅರಣ್ಯ ಗುಡ್ಡಗಳನ್ನು ಕಡಿದು, ಅಕ್ರಮ ಗಣಿಗಾರಿಕೆ ನಡೆಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ, ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಅರಣ್ಯ ಒತ್ತುವರಿ ಮಾಡಿ, ಅಡಿಕೆ ತೋಟ ಮಾಡಲಾಗಿದೆ. ಅರಣ್ಯ ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ಅನೇಕ ಸಲ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಸ್ಪಂದನೆ ಇಲ್ಲ. ಅರಣ್ಯ ಇಲಾಖೆ ಸಹಾಯವಾಣಿ 1926ಗೆ ಕರೆ ಮಾಡಿ, ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈ ವೇಳೆ ಸಾಮಾಜಿಕ ಹೋರಾಟಗಾರ ಚಿತ್ರಪ್ಪ ರಾಯಭಾಗ ಸೇರಿದಂತೆ ಇತರರು ಇದ್ದರು.-----
ಬಾಕ್ಸ್ಅರಣ್ಯಾಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ
ಅರಣ್ಯ ರಕ್ಷಣೆ, ಅರಣ್ಯ ಒತ್ತುವರಿ ತೆರವಿಗೆ ಚನ್ನಗಿರಿ ಭಾಗದ ಯಾವುದೇ ಅರಣ್ಯಾಧಿಕಾರಿಗಳಿಗೆ ಇಚ್ಛಾಶಕ್ತಿ ಬದ್ಧತೆ ಇಲ್ಲವಾಗಿದೆ. ಬಸವಾಪಟ್ಟಣ ಮಾರ್ಗದ ಸೂಳೆಕೆರೆಯ ಅರ್ಧ ಗುಡ್ಡವನ್ನೇ ಕಡಿದು ಹಾಕಿದ್ದಾರೆ. ನಾಳೆ ಇಡೀ ಗುಡ್ಡಗಳೇ ಕಣ್ಮರೆಯಾಗಲಿದೆ. ಈಗಾಗಲೇ ಭದ್ರಾ ಕಾಲುವೆ ಹಾದು ಹೋಗಿರುವ ತೂಗು ಸೇತುವೆ ಬಳಿಯೂ ಧಕ್ಕೆಯಾಗಿದೆ. ಸದನದಲ್ಲೂ ಶಾಸಕರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಶೇ.40, ಶೇ.50, ಶೇ.10 ಕಮೀಷನ್ ದಂಧೆ ಬಗ್ಗೆ ಚರ್ಚೆ ನಡೆಯುವ ಕಾಲಘಟ್ಟದಲ್ಲಿ ಶಾಸಕರೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಒತ್ತುವರಿ ತೆರವು ಮಾಡಿಸಲಿ. ಸೂಳೆಕೆರೆ ಗುಡ್ಡಗಳನ್ನು ರಕ್ಷಿಸಲು ಮುಂದಾಗಲಿ. ಇಂತಹ ಕಾರ್ಯಕ್ಕೆ ಜನರೂ ಕೈಜೋಡಿಸುತ್ತಾರೆ.ಸೈಯದ್ ನಯಾಜ್‌ಖಡ್ಗ ಸ್ವಯಂ ಸೇವಕರ ಸಂಘ
---------28ಕೆಡಿವಿಜಿ9: ಸೂಳೆಕೆರೆ ಭಾಗದಲ್ಲಿ ಅರಣ್ಯ, ಗುಡ್ಡ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು, ಮಣ್ಣು ತೆರವು ಮಾಡಿ, ಸಮತಟ್ಟು ಮಾಡುತ್ತಿರುವುದು.