ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಜೊತೆಗೆ ಪೋಷಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಅರಮೇರಿ ಕಳಂಚೇರಿ ಮಠದ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಜೊತೆಗೆ ಪೋಷಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಅರಮೇರಿ ಕಳಂಚೇರಿ ಮಠದ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಅವರು ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಜರುಗಿದ ಪಟ್ಟಣದ ಕೂರ್ಗ್ ವ್ಯಾಲಿ ಶಾಲೆಯ 25 ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೂರ್ಗ್ ವ್ಯಾಲಿ ವಿದ್ಯಾಸಂಸ್ಥೆಯು 25 ವರ್ಷಗಳನ್ನು ಪೂರೈಸಿದ್ದು ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಈ ಸಂಸ್ಥೆಯು ಕೇವಲ ವಿದ್ಯಾರ್ಜನೆಗೆ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಹಲವಾರು ಸಾಧನೆಗಳನ್ನು ಮಾಡಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಪೋಷಕರು ವಿದ್ಯಾರ್ಥಿಗಳ ಶಿಕ್ಷಣದ ಕಡೆ ಹೆಚ್ಚು ಗಮನವನ್ನು ಹರಿಸಬೇಕು. ಹಾಗೆಯೇ ಅವರಿಗೆ ಸಂಸ್ಕಾರವನ್ನು ಕಲಿಸಿ ಎಂದು ಕರೆ ನೀಡಿದರು. ಸಂಸ್ಥೆಯು 25 ವರ್ಷ ಪೂರೈಸಲು ಆಡಳಿತ ಮಂಡಳಿಯ ಚಿತ್ರ ಭಾನು ಹಾಗೂ ಸುಮಚಿತ್ರ ಭಾನು ರವರ ಪಾತ್ರ ಪ್ರಮುಖವಾಗಿದ್ದು ಅವರು ಹಲವಾರು ಸವಾಲುಗಳನ್ನು ಎದುರಿಸಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶಾಲೆಯು ಉತ್ತಮ ಫಲಿತಾಂಶ ನೀಡುವುದರ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಜಪೇಟೆ ಸಂತ ಅನ್ನಮ್ಮ ಪಿ . ಯು. ಕಾಲೇಜಿನ ಪ್ರಾಂಶುಪಾಲ ಹಾಗೂ ಅಮ್ಮತ್ತಿ ಸಂತ ಅಂತೋಣಿ ಚರ್ಚ್ ನ ಗುರುಗಳಾದ ರೆ. ಫಾ. ಮದಲೈ ಮುತ್ತು ರವರು ಮಾತನಾಡಿ ಒಂದು ವಿದ್ಯಾಸಂಸ್ಥೆಯು ದೊಡ್ಡದಿರಲಿ ಅಥವಾ ಸಣ್ಣದಿರಲಿ, ವಿದ್ಯಾಸಂಸ್ಥೆ ನಡೆಸುವವರ ಮನೋಭಾವನೆ ಮುಖ್ಯವಾಗಿದ್ದು ಅನೇಕ ಸವಾಲುಗಳ ಮಧ್ಯೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿರುವ ಆಡಳಿತ ಮಂಡಳಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ರಜತ ಮಹೋತ್ಸವವನ್ನು ಆಚರಿಸುತ್ತಿರುವ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ದೇವರು ಆಶೀರ್ವದಿಸಲಿ ಎಂದು ಹೇಳಿದರು. ಹಾಗೆಯೇ ಈ ವಿದ್ಯಾಸಂಸ್ಥೆಯು 50 ವರ್ಷಗಳನ್ನು ಪೂರೈಸಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ವ್ಯವಸ್ಥಾಪಕರು ಹಾಗೂ ಪ್ರಾಂಶುಪಾಲರಾದ ಸುಮಾ ಚಿತ್ರಭಾನು ಅವರು ಮಾತನಾಡಿ, ಸಂಸ್ಥೆಯು ನಡೆದು ಬಂದ ಹಾದಿಯನ್ನು ಸ್ಮರಿಸುತ್ತಾ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಗಣ್ಯರು ರಜತ ಮಹೋತ್ಸವದ ಸಂದರ್ಭದಲ್ಲಿ ಹೊರ ತಂದ ವಿದ್ಯಾ ಸಂಪದ ಕಿರು ಹೊತ್ತಿಗೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.ಸಮಾರಂಭದಲ್ಲಿ ವಿದ್ಯಾಸಂಸ್ಥೆಯಲ್ಲಿ ಇಲ್ಲಿಯವರೆಗೆ ಸೇವೆಯನ್ನು ಸಲ್ಲಿಸಿದ ಶಿಕ್ಷಕರು ಹಾಗೂ ಸಿಬ್ಬಂದಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ತರಗತಿವಾರು ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಚಿತ್ರ ಭಾನು, ಕಾರ್ಯದರ್ಶಿಗಳಾದ ಪ್ರಣವ್ ಚಿತ್ರ ಭಾನು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.