ಸಾರಾಂಶ
ಕನ್ನಡಪ್ರಭವಾರ್ತೆ ಹೊಳಲ್ಕೆರೆಶಿಕ್ಷಕರು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್ ಹೇಳಿದರು. ಸಮಗ್ರ ಶಿಕ್ಷಣ ಕರ್ನಾಟಕ, ಡಿಎಸ್ಇಆರ್ಟಿ ಮತ್ತು ಚಿತ್ರದುರ್ಗ ಡಯಟ್ ವತಿಯಿಂದ ಪಟ್ಟಣದ ಎಂ.ಎಂ. ಪ್ರೌಢಶಾಲಾ ಸಭಾಂಗಣದಲ್ಲಿ ಹೊಸದಾಗಿ ನೇಮಕವಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಬುನಾದಿ (ಇಂಡಕ್ಷನ್) ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯವರೆಗೆ ಅನೇಕ ರೀತಿ ಬದಲಾವಣೆ ಕಂಡುಬಂದಿದ್ದು, ಬೋಧನೆಯಲ್ಲಿ ಶಿಕ್ಷಕರು ಮಾರ್ಪಾಡು ಮಾಡಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಲು ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಸ್ತುತ ವಿದ್ಯಾರ್ಥಿಗಳ ಆಲೋಚನೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು ಶಾಲಾ ವಾತಾವರಣವನ್ನು ಆಕರ್ಷಣೀಯವಾಗಿಟ್ಟುಕೊಂಡು ಶೈಕ್ಷಣಿಕ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ನೋಡಲ್ ಅಧಿಕಾರಿ ಯು. ಸಿದ್ದೇಶಿ ಮಾತನಾಡಿ, ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆಯಲು ತರಬೇತಿಗಳು ಪೂರಕವಾಗಿವೆ. ಬೋಧನಾ ವಿಧಾನ, ಇಲಾಖಾ ಕಾರ್ಯಕ್ರಮಗಳ ಪರಿಚಯಿಸಲು ಶಿಕ್ಷಕರಿಗೆ ಮೊದಲ ಹಂತದಲ್ಲಿ 5 ದಿನದ ತರಬೇತಿ ನೀಡಲಾಗುತ್ತದೆ. ಶಿಕ್ಷಕರು ತರಬೇತಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡು ತರಗತಿ ಕೋಣೆಯಲ್ಲಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.ತರಬೇತಿ ಕಾರ್ಯಾಗಾರದ ಸಂಯೋಜಕ ಎಸ್. ಬಸವರಾಜು ಎನ್ ಪಿಇಪಿ ಪೋಸ್ಟರ್ ವಿತರಿಸಿ ಮಾತನಾಡಿ, ಸರ್ವಾಂಗೀಣ ವಿಕಾಸಕ್ಕೆ ಸಹಪಠ್ಯ ಚಟುವಟಿಕೆಗಳು ಪೂರಕವಾಗಿವೆ. ಮಕ್ಕಳಲ್ಲಿ ವರ್ತನೆಗಳು, ಮೌಲ್ಯಗಳು, ಕೌಶಲ್ಯಗಳು, ಆತ್ಮವಿಶ್ವಾಸ, ಸಂವೇದನಾಶೀಲತೆ ಬೆಳೆಸಲು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ (ಎನ್ ಪಿಇಪಿ) ಕಾರ್ಯಕ್ರಮದಡಿ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರು ಶಾಲೆಗಳಲ್ಲಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವುದರ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇರುದ್ರಪ್ಪ, ಶಿವಣ್ಣ, ಖಲಂದರ್, ಶಿಕ್ಷಕರಾದ ಮಾರುತಿ, ಗಗನ ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದರು.