ಶಾರದಾಳ ಪ್ರೋ ಕಬಡ್ಡಿ, ಆಳ್ವಾಸ್ ತಂಡ ಚಾಂಪಿಯನ್‌

| Published : May 19 2024, 01:46 AM IST

ಸಾರಾಂಶ

ಕಲಾದಗಿ: ಶಾರದಾಳದಲ್ಲಿ ನಡೆದ ಅಂತರ ರಾಜ್ಯಮಟ್ಟದ ಮುಕ್ತ ಮಹಿಳಾ ಕಬಡ್ಡಿ `ಶಾರದಾಳ ಪ್ರೋ ಕಬಡ್ಡಿ ವೈಭವ-ಸಿಸನ್ ೩ರಲ್ಲಿ ಮೂಡಬಿದರೆಯ ಆಳ್ವಾಸ್ ಮಹಿಳಾ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಬಹುಮಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಕಲಾದಗಿಸಮೀಪದ ಸುಕ್ಷೇತ್ರ ಶಾರದಾಳದಲ್ಲಿ ಗ್ರಾಮದೇವತೆ ಆದಿಶಕ್ತಿ ದ್ಯಾಮವ್ವದೇವಿಯ ಉಡಿತುಂಬುವ ಹಾಗೂ ಮಾರುತೇಶ್ವರ ಓಕುಳಿ ಅಂಗವಾಗಿ ಮಾರುತೇಶ್ವರ ಸ್ಪೋರ್ಟ್ಸ್ ಕ್ಲಬ್ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಅರ್ಸಿಸಿಯೇಶನ್ ಸಹಕಾರದೊಂದಿಗೆ ನಡೆದ ಅಂತರ ರಾಜ್ಯಮಟ್ಟದ ಮುಕ್ತ ಮಹಿಳಾ ಕಬಡ್ಡಿ ಟೂರ್ನಿ ಶಾರದಾಳ ಪ್ರೋ ಕಬಡ್ಡಿ ವೈಭವ-ಸಿಸನ್ ೩ರ ಗುರುವಾರ ರಾತ್ರಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಮೂಡಬಿದರೆಯ ರಾಷ್ಟ್ರೀಯ ಕಬಡ್ಡಿ ಪಟು ಧನಲಕ್ಷ್ಮೀ ನಾಯಕತ್ವದ ಆಳ್ವಾಸ್ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ₹ ೫೦ ಸಾವಿರ ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ಆಳ್ವಾಸ್ ತಂಡಕ್ಕೆ ತೀವ್ರ ಪೈಪೋಟಿ ನೀಡಿದ್ದ ಚಿಂಚಲಿಯ ರಾಷ್ಟ್ರೀಯ ಕಬಡ್ಡಿ ಪಟು ದೀಪಾ ಮುಶಾಳೆ ನಾಯಕತ್ವದ ಶ್ರೀ ಮಹಾಕಾಳಿ ತಂಡ ದ್ವಿತೀಯ ಸ್ಥಾನ ಪಡೆದು ₹ ೩೫,೦೦೦ ನಗದು ಹಾಗೂ ಟ್ರೋಫಿ ಪಡೆಯಿತು.

ರೋಚಕ ಹಣಾಹಣಿ: ಮುಂಬೈನ ಆರ್‌ಬಿಎಸ್‌ಸಿ ತಂಡ ಹಾಗೂ ರುದ್ರಾ ಸ್ಪೋರ್ಟ್ಸ್‌ ತಂಡಗಳೊಂದಿಗೆ ಸೆಮಿಫೈನಲ್‌ನಲ್ಲಿ ಆಖಾಡದಲ್ಲಿ ಗೆಲುವಿಗಾಗಿ ಸೆಣಸಾಡಿದ ಮೂಡಬಿದರೆಯ ಆಳ್ವಾಸ್ ಹಾಗೂ ಚಿಂಚಲಿಯ ಮಹಾಕಾಳಿ ತಂಡಗಳು ತೀವ್ರ ಸೆಣಸಾಟದ ನಂತರ ಅಂತಿಮ ಸುತ್ತಿಗೆ ಪ್ರವೇಶಿಸಿದ್ದವು. ಮುಂಬೈನ ರುದ್ರಾ ತಂಡ ತೃತಿಯ ಸ್ಥಾನ, ಹರಿಯಾಣದ ಎಸ್.ಎಸ್.ಅಕಾಡೆಮಿ ತಂಡ ಚತುರ್ಥ ಸ್ಥಾನ ಪಡೆದುಕೊಂಡವು

ಪಂದ್ಯಾವಳಿಯಲ್ಲಿ ಬೆಸ್ಟ್ ರೈಡರ್ ಆಗಿ ಆಳ್ವಾಸ್ ತಂಡದ ಧನಲಕ್ಷ್ಮೀ, ಬೆಸ್ಟ್ ಡಿಪೆಂಡರ್ ಆಗಿ ಮುಂಬೈನ ರುದ್ರಾ ತಂಡದ ಗೌರಿ ಕದಂ ಹಾಗೂ ಬೆಸ್ಟ್ ಆಲ್ ರೌಂಡರ್ ಆಗಿ ಚಿಂಚಲಿಯ ಮಹಾಕಾಳಿ ತಂಡದ ದೀಪಾ ಮುಶಾಳೆ ಬಹುಮಾನ ಪಡೆದರು. ಪುಣೆಯ ಹಿಂದವಿ ಕವಲೌ ಉತ್ತಮ ಮಹಿಳಾ ತಂಡವಾಗಿ ಹೊರಹೊಮ್ಮಿತು.