ಮಯೂರ ವಾಹನವನ್ನೇರಿ ಕೌಮಾರಿಯಾಗಿ ಕಂಗೊಳಿಸಿದಳು ಶಾರದೆ

| Published : Oct 07 2024, 01:32 AM IST

ಮಯೂರ ವಾಹನವನ್ನೇರಿ ಕೌಮಾರಿಯಾಗಿ ಕಂಗೊಳಿಸಿದಳು ಶಾರದೆ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇ ದಿನೇ ಮೆರಗುಪಡೆಯುತ್ತಿದ್ದು, ಪಟ್ಟಣದಲ್ಲಿ ಜನಜಂಗುಳಿ ಶ್ರೀ ಮಠದ ಆವರಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಹಳೆ ಮೊಳಗುತ್ತಿದೆ. ಒಂದೆಡೆ ಪ್ರತಿ ದಿನ ಮದ್ಯಾಹ್ನದಿಂದಲೇ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿದ್ದರೂ ಇನ್ನೊಂದೆಡೆ ದಸರೆ ದಿನೇ ದಿನೆ ಕಳೆಗಟ್ಟುತ್ತಿದೆ.

ಪೀಠದ ಅಧಿದೇವತೆ ಶಾರದೆಗೆ ನವರಾತ್ರಿ ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇ ದಿನೇ ಮೆರಗುಪಡೆಯುತ್ತಿದ್ದು, ಪಟ್ಟಣದಲ್ಲಿ ಜನಜಂಗುಳಿ ಶ್ರೀ ಮಠದ ಆವರಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಹಳೆ ಮೊಳಗುತ್ತಿದೆ. ಒಂದೆಡೆ ಪ್ರತಿ ದಿನ ಮದ್ಯಾಹ್ನದಿಂದಲೇ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿದ್ದರೂ ಇನ್ನೊಂದೆಡೆ ದಸರೆ ದಿನೇ ದಿನೆ ಕಳೆಗಟ್ಟುತ್ತಿದೆ.

ನಾಲ್ಕನೆ ದಿನವಾದ ಭಾನುವಾರ ಶಾರದೆಗೆ ಕೌಮಾರಿ ಅಲಂಕಾರ ಮಾಡಲಾಗಿತ್ತು. ಕೈಯಲ್ಲಿ ಶಸ್ತ್ರ, ಆಯುಧಗಳನ್ನು ಧರಿಸಿ ಮಯೂರ ವಾಹನ್ನವನ್ನೇರಿ ಕುಮಾರಸ್ವಾಮಿ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸುತ್ತಿರುವ ಶಾರದೆ ಕೌಮಾರಿಯಲಂಕಾರ ಭಕ್ತರ ಕಣ್ಮನ ಸೆಳೆಯಿತು.ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಪೀಠದ ಅಧಿದೇವತೆ ಶಾರದೆಗೆ ನವರಾತ್ರಿ ವಿಶೇಷ ಪೂಜೆ ನೆರವೇರಿತು.

ಶರನ್ನವರಾತ್ರಿ ಅಂಗವಾಗಿ ನಾಲ್ಕು ವೇದಗಳ ಪಾರಾಯಣ, ವಾಲ್ಮಿಕಿ ರಾಮಾಯಣ, ದೇವಿ ಭಾಗವತ, ಸೂತ ಸಂಹಿತೆ, ಲಕ್ಷ್ಮಿನಾರಾಯಣ ಹೃದಯ, ದುರ್ಗಾ ಸಪ್ತಶತಿ ಪಾರಾಯಣಗಳು ನೆರವೇರಿದವು. ದುರ್ಗಾಜಪ, ಭುವನೇಶ್ವರಿ ಜಪ, ಶ್ರೀಸೂಕ್ತ ಜಪಗಳು, ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾವರಣ ಪೂಜೆ,ಸುವಾಸಿನಿ ಪೂಜೆ,ಕುಮಾರಿ ಪೂಜೆ ನೆರವೇರಿತು.

ಸಂಜೆ ಬೀದಿ ಉತ್ಸವದಲ್ಲಿ ಮೆಣಸೆ ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ಮಂಡಳಿಗಳು, ವಿವಿಧ ಜಾನಪದ ಕಲಾತಂಡಗಳು, ಸುತ್ತಮುತ್ತಲ ಗ್ರಾಮ, ತಾಲೂಕುಗಳ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸಂಪ್ರದಾಯದಂತೆ ನವರಾತ್ರಿಯ ಜಗದ್ಗುರುಗಳ ದರ್ಬಾರ್ ನಡೆಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ದೇವಾಲಯ ಪ್ರವೇಶಿಸಿದ ಬಳಿಕ ಸಿಂಹಾಸನದಲ್ಲಿರುವ ಶ್ರೀ ಶಾರದೆ ವಿಗ್ರಹವನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಒಳಪ್ರಾಕಾರದಲ್ಲಿ ಮೂರು ಸುತ್ತು ವೇದ ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿಸಲಾಯಿತು. ಜಗದ್ಗುರುಗಳು ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನ ದಲ್ಲಿ ಆಸಿನರಾದ ಬಳಿಕ ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ, ಸರ್ವವಾದ್ಯ ಸೇವೆ ನಡೆಯಿತು.

ನವರಾತ್ರಿ 5ನೆಯ ದಿನವಾದ ಸೋಮವಾರ ಶಾರದೆಗೆ ವೈಷ್ಣವಿ ಅಲಂಕಾರ ನಡೆಯಲಿದೆ. ಶತಚಂಡೀಯಾಗದ ಸಂಕಲ್ಪ, ಪುರಶ್ಚರಣಾಂಭ ನಡೆಯಲಿದೆ. ಸಂಜೆ ರಾಜಬೀದಿ ಉತ್ಸವದಲ್ಲಿ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಸಂಜೆ ಸಾಂಸ್ಕೃತಿಕ ಮಹೋತ್ಸವದಲ್ಲಿ ರುದ್ರಪಟ್ನ ಸಹೋದರರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ.

6 ಶ್ರೀ ಚಿತ್ರ 1-

ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದಲ್ಲಿ ಶಾರದೆಗೆ ಭಾನುವಾರ ಕೌಮಾರಿಯಲಂಕಾರ ಮಾಡಲಾಗಿತ್ತು.