ಸಾರಾಂಶ
ಶಿಗ್ಗಾಂವಿ: ಸಂತ ಶಿಶುನಾಳ ಶರೀಫರು, ಗೋವಿಂದ ಭಟ್ಟರು ಭಾವೈಕ್ಯದ ಪ್ರತೀಕರಾಗಿದ್ದಾರೆ. ಅದೇ ರೀತಿ ಭಾವೈಕ್ಯತೆಯ ಕೇಂದ್ರವಾಗಿ ಇಲ್ಲಿನ ವಿರಕ್ತಮಠ ರೂಪುಗೊಂಡಿದೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ ಬಣ್ಣಿಸಿದರು.ಪಟ್ಟಣದ ವಿರಕ್ತಮಠದಲ್ಲಿ ನಡೆದ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ ಮತ್ತು ಲಿಂ. ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಶ್ರದ್ಧಾ ಭಕ್ತಿಯಿಂದ ದೇಶದಲ್ಲಿ ಅನೇಕ ಶರಣರು, ಮಹಾತ್ಮರು ತಮ್ಮದೇ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಶರಣ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ. ಅಂತಹ ಶ್ರೀಮಂತ ಸಂಸ್ಕೃತಿ ನಮ್ಮದಾಗಿದೆ ಎಂದರು.
ಸೀತಾಗಿರಿಯ ಡಾ. ಎ.ಸಿ. ವಾಲಿ ಮಹಾರಾಜರು ಪ್ರವಚನ ನೀಡಿ, ಮಹಾತ್ಮರ, ಶರಣರ ವಚನಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಅಂತಹ ವಚನಗಳನ್ನು ರಕ್ಷಣೆ ಮಾಡುವ ಹೊಣೆ ನಮ್ಮದಾಗಿದೆ. ಅವರ ವಚನಗಳಿಂದ ಇಂದಿಗೂ ಸ್ಮರಣೀಯರಾಗಿದ್ದಾರೆ. ಅವುಗಳ ಆಶಯದಂತೆ ನಡೆಯವುದು ಮುಖ್ಯವಾಗಿದೆ ಎಂದರು.ವಿರಕ್ತಮಠದ ಸಂಗನಬಸವ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಪುಟ್ಟರಾಜ ಕವಿ ಗವಾಯಿಗಳ ಸಂಘದ ಅಧ್ಯಕ್ಷ ಫಕ್ಕೀರೇಶ ಕೊಂಡಾಯಿ, ಗೌರವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ಯುವ ಮುಖಂಡ ರಾಜು ಕುನ್ನೂರ ಶಿವಯ್ಯ ಕಳ್ಳಿಮಠ, ಅಶೋಕ ರಾಯಕರ, ರಾಮಣ್ಣ ಕಬನೂರ, ನಾಗರಾಜ ಪಾಲನಕರ, ಎಸ್.ಎನ್. ಮುಗಳಿ, ನಾಗಪ್ಪ ವಾಲ್ಮೀಕಿ, ಉಳವಯ್ಯ ಕುಂಬಾರಗೇರಿಮಠ, ಬಸಲಿಂಗಪ್ಪ ನರಗುಂದ, ಮಂಜುನಾಥ ಹಾದಿಮನಿ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಇದ್ದರು.ಸಭೆಗೂ ಮುನ್ನ ಬಮ್ಮಿನಗಟ್ಟಿಮಠದ ಉಳವಯ್ಯ ಸ್ವಾಮೀಜಿಯವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಸವಲಿಂಗ ದೇವರು, ಸವಣೂರಿನ ಮಹಾಂತ ಸ್ವಾಮೀಜಿ ಇದ್ದರು. ಶಶಿಕಾಂತ ರಾಠೋಡ ಹಾಗೂ ಶರೀಫ್ ಮಾಕಪ್ಪನವರ ನಿರೂಪಿಸಿದರು.ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಕ್ರೀಡಾಕೂಟ
ಹಾವೇರಿ: ನಗರದ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ನೆಹರು ಯುವ ಕೇಂದ್ರ ಹಾಗೂ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಮಹಾವಿದ್ಯಾಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.ಕ್ರೀಡಾಕೂಟವನ್ನು ಶ್ರೀ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಸ್.ಎಸ್. ಮುಷ್ಠಿ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ವಿದ್ಯಾಪೀಠದ ಉಪಾಧ್ಯಕ್ಷ ವಿ.ವಿ. ಅಂಗಡಿ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು. ನೆಹರು ಯುವ ಕೇಂದ್ರ ಸಂಘದ ಜಿಲ್ಲಾ ಉಪಾಧ್ಯಕ್ಷ ಗಣೇಶ ರಾಯ್ಕರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕ್ರೀಡಾಕೂಟದಲ್ಲಿ ಸ್ಲೋ ಸೈಕ್ಲಿಂಗ್, ಶಾಟ್‌ಪುಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, ವಾಲಿಬಾಲ್, ರಿಲೇ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸವಿತಾ ಎಸ್. ಹಿರೇಮಠ ಹಾಗೂ ಕಾಲೇಜು ಒಕ್ಕೂಟದ ಅಧ್ಯಕ್ಷರಾದ ಟಿ.ಎನ್. ಮಡಿವಾಳರ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.