ಸಾರಾಂಶ
ಶಿರಹಟ್ಟಿ: ಶರಣರ ತತ್ವಾದರ್ಶ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಮಾಜದಲ್ಲಿ ಹಿಂಸೆ,ದ್ವೇಷಕ್ಕೆ ಅವಕಾಶವಿರದು. ಶಾಂತಿ ಹಾಗೂ ಸೌಹಾರ್ದತೆ ನಮ್ಮ ಧ್ಯೇಯವಾಗಿರಬೇಕು. ಜಾತಿ ವ್ಯವಸ್ಥೆಯಿಂದ ದೂರವಿರಬೇಕು ಎಂದು ಜಿಲ್ಲಾ ಯುಥ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ಸೋಮವಾರ ಸಂಜೆ ಪಟ್ಟಣದ ಬಡಿಗೇರ ಓಣಿಯಲ್ಲಿ ಜರುಗಿದ ಶರಣಬಸವೇಶ್ವರ ಪುರಾಣ ಪ್ರವಚನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಬೇಕು. ಶೋಷಿತರ, ಬಡವರ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಲಿವುಗಳಿಗೆ ಸ್ಪಂದಿಸುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.ಸಾರ್ಥಕ ಜೀವನಕ್ಕೆ ಪುರಾಣ, ಪ್ರವಚನಗಳು ಪೂರಕವಾಗಿವೆ. ಇದರಿಂದ ಒಳ್ಳೆಯ ವಿಚಾರಗಳು ಮೂಡಲು ಸಾಧ್ಯ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಯುವಜನತೆ ಹೆಚ್ಚಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಧ್ಯಾತ್ಮದತ್ತ ಒಲವು ತೋರಬೇಕು. ಭಕ್ತಿ ಬದುಕನ್ನು ದಿವ್ಯಗೊಳಿಸುವ ಮಧುರ ಸಾಧನ. ಹಿರಿಯರಾಗಲಿ, ಕಿರಿಯರಾಗಲಿ ಅವರ ಮನಸ್ಸುಗಳಲ್ಲಿ ಭಕ್ತಿ ಭಾವ ಒಡಮೂಡಬೇಕು ಎಂದು ತಿಳಿಸಿದರು.
ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ಶರಣರ ಸಂದೇಶಗಳನ್ನು ಪ್ರಚುರಪಡಿಸುವ ಕಾರ್ಯ ಯಥೇಚ್ಛವಾಗಿ ನಡೆಯುತ್ತಿದೆ. ಇದು ಅತ್ಯಂತ ಸಂತೋಷದಾಯಕ ಸಂಗತಿ. ಆದರೆ ಸಮಾಜದಲ್ಲಿ ಕೆಲ ಬದಲಾವಣೆ ಆಗದೇ ಇರುವದು ವಿಷಾದಕರ ಸಂಗತಿ. ಆದ್ದರಿಂದ ತಪ್ಪುಗಳನ್ನು ಗುರುತಿಸಿ ಸರಿಯಾದ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ಪುರಾಣ,ಪ್ರವಚನ ಆಲಿಸುವುದರಿಂದ ಕೆಟ್ಟ ವಿಚಾರಗಳು ದೂರವಾಗಿ,ಒಳ್ಳೆಯ ಭಾವನೆ ಮನಸ್ಸಲ್ಲಿ ಮೂಡುತ್ತವೆ. ಆಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ವಿಚಾರಗಳನ್ನು ಹೊಂದಿರುವ ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಭಕ್ತರು ಪಾಲ್ಗೊಳ್ಳಬೇಕು ಎಂದರು.
ಇಂದಿನ ಆಧುನಿಕತೆ ಯುಗದಲ್ಲಿ ಜನರಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಮೂಡಿಸುವ ನಿಟ್ಟಿನಲ್ಲಿ ಪುರಾಣ ಪ್ರವಚನ ಕೇಳುವುದು ಅವಶ್ಯವಿದೆ. ಜನರಲ್ಲಿ ಸಂಸ್ಕಾರ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ. ಯುವಜನರಲ್ಲಿ ಧಾರ್ಮಿಕ ಪರಿಜ್ಞಾನ ಕಡಿಮೆಯಾಗುತ್ತಿದ್ದು, ಎಲ್ಲರೂ ಒತ್ತಡದ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಜನರು ಪ್ರವಚನ ಆಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.ಎಸ್.ಬಿ. ಹೊಸೂರ ಪ್ರಾಸ್ತಾವಿಕ ಮಾತನಾಡಿದರು. ವರವಿ ಮೌನೇಶ್ವರ ಮಠದ ಮೌನೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.ಕೀರ್ತನ ಭಾರತಿ ವಿದ್ಯಾಪೀಠದ ಅಧ್ಯಕ್ಷ ಹಾಗೂ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯ ಇಳಕಲ್ಲದ ಆರ್.ಶರಣಬಸವ ಶಾಸ್ತ್ರಿಗಳು ಪ್ರವಚನ ನೀಡಿದರು. ರೇಷ್ಮೆ ಉದ್ಯಮಿ ಚಂದ್ರಕಾಂತ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ರಾಘವೇಂದ್ರ ದೊಡ್ಡಮನಿ, ನಿವೃತ್ತ ಶಿಕ್ಷಕ ಎಚ್.ಎಂ. ದೇವಗಿರಿ, ಪಿಎಸಿಎಸ್ ಸದಸ್ಯ ಉಮೇಶ ತೇಲಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ವಿಜೇತ ಶಿಕ್ಷಕಿ ರೇಣುಕಾ ಜಗಂಡಭಾವಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜ ತುಳಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ ಆರೆಪಲ್ಲಿ, ಪಪಂ ಸದಸ್ಯ ಮಂಜುನಾಥ ಘಂಟಿ, ಮೃತ್ಯುಂಜಯ ಬಡಿಗೇರ, ಬಸವರಾಜ ಅಡರಕಟ್ಟಿ ಇತರರು ಇದ್ದರು.ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಐ.ಜಿ. ಬಡಿಗೇರ ನಿರೂಪಿಸಿದರು. ಬಸವರಾಜ ಬೋರಶೆಟ್ಟರ ವಂದಿಸಿದರು.