ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶೋಷಣೆಗೆ ಒಳಗಾದ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಜಾತಿ, ಮತಗಳ ಬೇಧ ತೊರೆದು ಕ್ರಾಂತಿ ಮಾಡಿದ ಬಸವಾದಿ ಶರಣರ ತತ್ವ ಆದರ್ಶಗಳು ಇಂದು ಪ್ರಸ್ತುತವಾಗಿವೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದಿಂದ ನಡೆಯದೇ ಧರ್ಮ ಧರ್ಮಗಳಲ್ಲಿ ಕದನ, ಮೇಲು, ಕೀಳು ಅಸ್ಪೃಶ್ಯತೆ ಹೋಗದಿದ್ದರೆ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆ ಬೇರೆ ಬೇರ ಧರ್ಮ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೂ ಪೂರ್ವದಲ್ಲಿ ಮಠಾಧೀಶರು, ಬುದ್ಧಿಜೀವಿಗಳು, ಸಾಮಾಜ ಚಿಂತಕರು ಹಾಗೂ ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಶರಣರ ತತ್ವ ಆಚರಣೆಗೆ ಬದ್ಧರಾಗಬೇಕಿದ್ದು, ಅಸ್ಪೃಶ್ಯತೆ ಹೋಗಲಾಡಬೇಕಿದೆ. ಈ ನಿಟ್ಟಿನಲ್ಲಿ ಯುವಕರು ಸಿದ್ಧರಾಗಬೇಕು. ನಮ್ಮ ಹಕ್ಕನ್ನು ಪಡೆದುಕೊಳ್ಳಲು ಒಗ್ಗಟ್ಟಿನ ಅಗತ್ಯವಿದೆ. ಉದ್ಯೋಗದಿಂದ ವಂಚಿತರಾಗಿ ಎಲ್ಲ ಸಮಾಜಗಳು ಬೀದಿ ಪಾಲಾಗುತ್ತಿವೆ. ತಮ್ಮ ಮೂಲ ಕಸಬನ್ನು ಗೌರವಿಸಿ ಕಾಲಕ್ಕೆ ತಕ್ಕಂತೆ ಆಧುನಿಕ ಸ್ಪರ್ಶ ಕೊಡಬೇಕು. ಸಮಾಜ ಮುಂದೆ ಬರಲು ಸಮಾಜದ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಇಲ್ಲವೇ ರಾಜಕೀಯ ಶಕ್ತಿ ಪಡೆದುಕೊಂಡಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ 12ನೇ ಶತನಾಮದ ಶರಣರು ಶ್ರಮಿಸಿದ್ದಾರೆ. ಆದರೆ ನಾವು ಸಿದ್ಧಾಂತಗಳಿಗೆ ತಿಲಾಂಜಲಿಯನ್ನಿಟ್ಟಿದ್ದೇವೆ. ಇದರಿಂದ ಅವರ ತತ್ವಗಳಿಗೆ ಅವಮಾನ ಮಾಡಿದಂತಾಗುತ್ತಿದೆ. ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಪರಿವರ್ತನೆ ಕಾಲ ಬರಬೇಕಿದೆ. ಹಡಪದ ಅಪ್ಪಣ್ಣನವರು ಬಸವಣ್ಣನವರ ಮಾರ್ಗದಲ್ಲಿ ನಡೆದಿದ್ದು, ನೀಲಾಂಬಿಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಹಡಪದ ಸಮುದಾಯದ ವ್ಯಕ್ತಿ. ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಮುದಾಯದವರು ಅಭಿವೃದ್ಧಿ ಹೊಂದಬೇಕಾದರೆ ಮುಂದಿನ ಪೀಳಿಗೆ ಉನ್ನತ ಶಿಕ್ಷಣ ಪಡೆದರೆ ಮಾತ್ರ ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮತೋಲನ ಇಲ್ಲ. ಮಕ್ಕಳಿಗೆ ಶಿಕ್ಷಣ ನೀಡಿ ಅವರಲ್ಲಿ ಶರಣರ ಆದರ್ಶಗಳನ್ನು ತುಂಬುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.ಡಾ.ಬಸವಲಿಂಗ ಸ್ವಾಮೀಜಿ ಉಪನ್ಯಾಸ ನೀಡಿ ಮಾತನಾಡಿ, ಲಿಂಗ ಪೂಜೆಯಿಂದ ಏಕಾಗ್ರತೆ ಹಾಗೂ ಉಸಿರಾಟ ಹತೋಟಿಯಲ್ಲಿರಲಿದೆ. ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ನಿತ್ಯ, ಸತ್ಯ ಕಾಯಕ ಅನುಸರಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಜಯಂತಿ ಸ್ಮರಣಾರ್ಥವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನಿಜ ಸುಖಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನುಭವ ಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಓ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯಾಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯ ಮುಖಂಡರಾದ ಮಲ್ಲಣ್ಣ ಹಡಪದ, ಅಶೋಕ ನಾವಿ, ಲಕ್ಷ್ಮಣ ಹಡಪದ, ಎಚ್.ಪಿ.ವೈದ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.ಭಾವಚಿತ್ರ ಮೆರವಣಿಗೆ:
ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ವಿವಿಧ ಜಾನಪದ ಕಲಾತಂಡಗೊಂದಿಗೆ ನಗರದ ನಾನಾ ಕಡೆ ಸಂಚರಿಸಿ ಡಾ.ಅಂಬೇಡ್ಕರ್ ಭವನಕ್ಕೆ ಮುಕ್ತಾಯಗೊಂಡಿತು.