ಪ್ರಸ್ತುತ ಸಮಾಜಕ್ಕೆ ಶರಣರ ವಚನಗಳು ದಾರಿದೀಪ

| Published : Jan 29 2025, 01:31 AM IST

ಸಾರಾಂಶ

ಪ್ರಸ್ತುತ ಸಮಾಜಕ್ಕೆ ಶರಣರ ವಚನಗಳು ದಾರಿದೀಪವಾಗಿದ್ದು, ವಚಗಳು ರಚನೆಯಾಗಿ ಸಾವಿರ ವರ್ಷ ಕಳೆದರೂ ಇಂದಿಗೂ ಎಂದೆಂದಿಗೂ ಮಾರ್ಗದರ್ಶಕವಾಗಿಯೇ ಎಂದು ನಿವೃತ್ತ ಎಸಿಪಿ ಹಾಗೂ ಸಮಾಜ ಸೇವಕ ಲೋಕೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಪ್ರಸ್ತುತ ಸಮಾಜಕ್ಕೆ ಶರಣರ ವಚನಗಳು ದಾರಿದೀಪವಾಗಿದ್ದು, ವಚಗಳು ರಚನೆಯಾಗಿ ಸಾವಿರ ವರ್ಷ ಕಳೆದರೂ ಇಂದಿಗೂ ಎಂದೆಂದಿಗೂ ಮಾರ್ಗದರ್ಶಕವಾಗಿಯೇ ಎಂದು ನಿವೃತ್ತ ಎಸಿಪಿ ಹಾಗೂ ಸಮಾಜ ಸೇವಕ ಲೋಕೇಶ್ವರ ತಿಳಿಸಿದರು.

ತಾಲೂಕಿನ ಕಿಬ್ಬನಹಳ್ಳಿಯ ಶ್ರೀ ರಂಭಾಪುರಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ, ಶರಣ ಧರ್ಮ ಪ್ರಸಾರ ಹಾಗೂ ವಚನ ಕಂಠಪಾಠ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದ ಕಾಲಘಟ್ಟದ ಶರಣರು ಕೇವಲ ಒಂದು ಜಾತಿ ಮತ ಧರ್ಮಕ್ಕೆ ಸೀಮಿತವಾಗದೆ ಕಾಯಕ ನಿಷ್ಠೆ ಆದರ್ಶಗಳಿಂದ ಸರ್ವ ಸಮಾನ ಸಮಾಜ ಕಟ್ಟಿ ಅನುಭವ ಮಂಟಪದ ಮುಖಾಂತರ ಸಾವಿರಾರು ವಚನಗಳನ್ನ ರಚಿಸಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇಂದು ಶರಣರ ವಚನಗಳು ವಿಶ್ವದಾದ್ಯಂತ ಮಾನ್ಯತೆ ಪಡೆದಿವೆ. ವಚನಗಳ ಸಾರವನ್ನು ಅರಿತರೆ ಮಾತ್ರ ವಚನಗಳ ಆಳ ತಿಳಿಯುತ್ತದೆ. ವಚನಗಳನ್ನು ಓದಿ ಮನನ ಮಾಡಿಕೊಂಡರೆ ಸಮಾಜವೂ ಅಭಿವೃದ್ಧಿಯಾಗುತ್ತದೆ ಬದುಕು ಸಮಾಜಮುಖಿಯಾಗಿ ರೂಪುಗೊಳ್ಳುತ್ತದೆ. ಜಾತಿ, ವರ್ಗ, ವರ್ಣ, ಲಿಂಗ ಭೇದಗಳನ್ನು ದೂರೀಕರಿಸಿ ಸಮ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಿದ ಶರಣರ ಒಂದೊಂದು ವಚನಗಳೂ ನುಡಿ ಮುತ್ತುಗಳಾಗಿವೆ ಎಂದರು. ದತ್ತಿ ಉಪನ್ಯಾಸಕರಾದ ನಂ. ಶಿವಗಂಗಪ್ಪ ಮಾತನಾಡಿ, ಶರಣರ ಆದರ್ಶ ನಡೆ, ನುಡಿಗಳು ನಮಗೆ ಪ್ರೇರಕವಾಗಿವೆ. ಉತ್ತಮ ಬದುಕಿನ ಸರಳ ಸೂತ್ರಗಳನ್ನು ಕಾಯಕದ ಮಹತ್ವವನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದವರು ವಚನಕಾರರು. ಇಂದಿನ ಮಕ್ಕಳೇ ನಮ್ಮ ನಾಡಿನ ಆಸ್ತಿಯಾಗಿದ್ದು, ಶರಣರ ವಚನಗಳನ್ನು ಅವರಿಗೆ ಮನದಟ್ಟು ಮಾಡುವ ಮೂಲಕ ಉಳಿಸಿ, ಬೆಳೆಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಸಾಪ ತಾ. ಅಧ್ಯಕ್ಷ ಪಿ.ಆರ್. ಗುರುಸ್ವಾಮಿ ಮಾತನಾಡಿ, ಶರಣ ಸಂಸ್ಕೃತಿ, ಶರಣ ಸಾಹಿತ್ಯದ ಪ್ರಸಾರ ತಾಲೂಕಿನಲ್ಲಿ ವ್ಯವಸ್ಥಿತವಾಗಿ ನಡೆಯುವಂತಾಗಲು ಕ್ರಿಯಾಶೀಲ ಹೋಬಳಿ ಘಟಕಗಳನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ದತ್ತಿ ದಾನಿಗಳಾದ ಎಂ.ಬಿ. ವಿಜಯಕುಮಾರ್, ಮುಖ್ಯ ಶಿಕ್ಷಕ ನವೀನ್ ಇವರನ್ನು ಗೌರವಿಸಲಾಯಿತು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ, ಕದಳಿ ವೇದಿಕೆ ಅಧ್ಯಕ್ಷೆ ಎಂ.ಎಸ್. ಸ್ವರ್ಣಗೌರಿ, ಮಹಲಿಂಗಪ್ಪ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಗದೀಶ್, ನಂದೀಶಪ್ಪ, ಶಸಾಪ ಪದಾಧಿಕಾರಿಗಳಾದ ರಾಜಶೇಖರ್, ಕುಮಾರಸ್ವಾಮಿ, ಕೆ.ಎಸ್. ಸದಾಶಿವಯ್ಯ, ಜಯಣ್ಣ, ರುಕ್ಮಿಣಮ್ಮ, ಶುಭ, ಶಾರದಮ್ಮ, ಕಾತ್ಯಾಯಿನಿ, ಡಿ.ಎಸ್. ಲೋಕೇಶ್, ಮರುಳಪ್ಪ, ಎಚ್.ಎಸ್. ಮಂಜಪ್ಪ, ಸೋಮಶೇಖರ್ ಮತ್ತಿತರರಿದ್ದರು.