ಬಸವಣ್ಣ ಈ ನಾಡಿನಲ್ಲಿ ಜನ್ಮ ಪಡೆಯದಿದ್ದರೆ ಸಮಾಜದಲ್ಲಿ ಅಸಾಮಾನ್ಯ ಇನ್ನೂ ತಾಂಡವವಾಡುತ್ತಿತ್ತು.
ಕನ್ನಡಪ್ರಭ ವಾರ್ತೆ ಮೈಸೂರುಶರಣ ಸಾಹಿತ್ಯ ತಾಲೂಕು ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್ ವತಿಯಿಂದ ನಗರದ ಸರಸ್ವತಿಪುರಂನ ಮಹಿಳೆಯರು ಮತ್ತು ಪುರುಷರ ಮಾನಸಿಕ ಆರೋಗ್ಯ ಚಿಕಿತ್ಸಾ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಮಂಗಳವಾರ ವಚನಗಳಲ್ಲಿ ವ್ಯಸನಮುಕ್ತ ಜೀವನ ಕುರಿತು ಮೂರನೇ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಉದ್ಘಾಟಿಸಿ ಮಾತನಾಡಿ, ಬಸವಣ್ಣ ಈ ನಾಡಿನಲ್ಲಿ ಜನ್ಮ ಪಡೆಯದಿದ್ದರೆ ಸಮಾಜದಲ್ಲಿ ಅಸಾಮಾನ್ಯ ಇನ್ನೂ ತಾಂಡವವಾಡುತ್ತಿತ್ತು. ಸಮ ಸಮಾಜದ ಜೀವನ ಪರಿಕಲ್ಪನೆ ಹುಟ್ಟಿದ್ದೆ ವಚನ ಸಾಹಿತ್ಯ ಹುಟ್ಟಿದ ಮೇಲೆ. ಮನುಷ್ಯ ತನ್ನನ್ನು ತಾನು ಕಳೆದುಕೊಂಡಿದ್ದಾನೆ. ಮತ್ತೆ ಕಂಡುಕೊಳ್ಳಬೇಕಾದರೆ ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವ್ಯಸನಕ್ಕೆ ದಾಸರಾದಕೂಡಲೆ ಜೀವನ ಮುಗಿದು ಹೋಯಿತು ಎನ್ನುವ ಕಲ್ಪನೆ ಬೇಡ. ಮುಂದೆಯೂ ಕೂಡ ನಿಮಗೆ ಜೀವನ ಇದೆ. ನಮ್ಮನ್ನು ನಾವು ಅರಿತುಕೊಂಡರೆ ಬದುಕು ಸಾರ್ಥಕವಾಗುತ್ತದೆ. ಪ್ರತಿಯೊಬ್ಬರು ಕೂಡ ವಚನ ಓದಬೇಕು. ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಇದರಿಂದ ಉತ್ತಮ ದಾರಿ ಕಂಡುಕೊಳ್ಳಲು ಸಾಧ್ಯ. ಬದಲಾವಣೆಯ ಛಲವನ್ನು ಬೆಳಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ವಚನಗಳಲ್ಲಿ ವ್ಯಸನಮುಕ್ತ ಜೀವನ ವಿಷಯ ಕುರಿತು, ಶಾರದ ವಿಲಾಸ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ದೇವಿಕಾ ಮಾತನಾಡಿ, ಮನಸ್ಸಿನ ಮೇಲೆ ಹಿಡಿತ ಇದ್ದರೆ ಎಲ್ಲದಕ್ಕೂ ಕಡಿವಾಣ ಹಾಕಬಹುದು. ಮನಸ್ಸು ಕೊಡುವ ಎಚ್ಚರಿಕೆಯನ್ನು ಮೊದಲು ನಾವು ಗ್ರಹಿಸಬೇಕು. ಈ ರೀತಿ ಗ್ರಹಿಸಿದರೆ ವ್ಯಸನದ ಕೂಪಕ್ಕೆ ನಾವು ಬೀಳುವುದಿಲ್ಲ. ಎಲ್ಲವನ್ನೂ ಮೆಟ್ಟಿನಿಲ್ಲುವ ಶಕ್ತಿ ನಮ್ಮಲ್ಲೆ ಇದೆ. ಅದನ್ನು ಜಾಗೃತಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಚನ ಸಾಹಿತ್ಯದ ಓದಿನಿಂದ ಬೌದಿಕ ಬೆಳವಣಿಗೆ ಸಾಧ್ಯ. ಯಾರು ಹುಟ್ಟಿನಿಂದ ಕೆಟ್ಟವರಲ್ಲ. ನಮ್ಮ ಆಯ್ಕೆಯಿಂದೆ ನಮ್ಮ ಜೀವನ ನಿಂತಿರುತ್ತದೆ. ಆದ್ದರಿಂದ ಅರಿಷಡ್ ವರ್ಘವನ್ನು ತ್ಯಜಿಸಿ, ಸಪ್ತ ವ್ಯಸನಗಳನ್ನು ಬಿಟ್ಟು ಲಿಂಗ ವ್ಯಸನಿಯಾದರೆ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಸಜ್ಜನ, ಸದ್ಭಾವಿಗಳಿಂದ ಜಂಗಮ, ಆಚಾರ, ಲಿಂಗವನ್ನು ಕಾಣಬಹುದು. ಇದನ್ನು ಕಂಡರೆ ತನ್ನನ್ನು ತಾನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ ಸಂಘದ ಮೇಲೆ ನಮ್ಮ ಜೀವನ ನಿಂತಿದೆ ಎಂದು ವಚನಕಾರರು ಹೇಳುತ್ತಾರೆ. ಹಾಗಾಗಿ ನಾವು ಉತ್ತಮರ ಸಂಘ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, 12ನೇ ಶತಮಾನ ಹಲವಾರು ಕ್ರಾಂತಿಗೆ ಕಾರಣವಾಯಿತು. ಅವರ ಸಪ್ತಸೂತ್ರಗಳು ಬದುಕಿಗೆ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಮೋಕ್ಷದ ಮಾರ್ಗಕ್ಕೆ ಕರೆದುಕೊಂಡು ಹೋಗುತ್ತದೆ. ವಚನಗಳನ್ನು ಭಿತ್ತುವ ಕೆಲಸವನ್ನು ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ವ್ಯಸನಿಗಳು ಪರಿವರ್ತನೆಯಾದರೆ ನಮ್ಮ ಕೆಲಸ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ತಾಲೂಕು ಶರಣ ಸಾಹಿತ್ ಪರಿಷತ್ತಿನ ಸೇವೆ ಎಲ್ಲ ವರ್ಗದ ಜನರಿಗೂ ಸಿಗಬೇಕು ಎಂದು ಮನಗಂಡು ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದೆ. ವಚನ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ನಿಜವಾದ ಮಾರ್ಗ ಅಡಗಿದೆ. ಶಾಲಾ, ಕಾಲೇಜು, ವಸತಿ ನಿಲಯಗಳು ಹೀಗೆ ಹತ್ತು ಹಲವು ಸಂಘ, ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಸರ್ಕಾರ ತೊಟ್ಟಿಲು ತೂಗುವ, ಮಗುವನ್ನು ಚಿವುಟುವ ಕೆಲಸ ಮಾಡುತ್ತದೆ. ಈ ಕಡೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು, ಮತ್ತೊಂದು ಕಡೆ ಮದ್ಯಪಾನ ಸಂಯಮ ಮಂಡಳಿಯನ್ನು ತೆರೆದುಸಾಂತ್ವನ ಹೇಳುತ್ತದೆ. ಈ ನಿಟ್ಟಿನಲ್ಲಿ ವ್ಯಸನಿಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ನಿಮ್ಮ ಸಂಸಾರ ಬೀದಿ ಪಾಲಾಗದಂತೆ ನೀವೆ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.--- ಬಾಕ್ಸ್ ....ಬಸವಮಾರ್ಗ ಫೌಂಡೇಷನ್ (ರಿ) ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು ಮಾತನಾಡಿ, ವ್ಯಸನಕ್ಕೆ ದಾಸರಾದವರು ಎಲ್ಲರಿಂದಲೂ ದೂರಾಗುತ್ತಾರೆ. ಮತ್ತೆ ಭಗವಂತನನ್ನು ಸೇರಲು ಈ ಕಾರ್ಯಕ್ರಮ ಅಡಿಗಲ್ಲಾಗಿದೆ. ಜಗತ್ತಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸೂರು ಇದೆ. ಆದರೆ ವ್ಯಸನದ ಕಾಯಿಲೆಗೆ ತುತ್ತಾದವರಿಗೆ ಯಾವುದೇ ಸೂರಿಲ್ಲ. ಜನರು ವ್ಯಸನಿಯನ್ನು ದೂರುತ್ತಾರೆ ಹೊರತು ವ್ಯಸನವನ್ನು ದೂರುವುದಿಲ್ಲ. ವ್ಯಸನಕ್ಕೆ ದಾಸರಾದವರನ್ನು ಕರುಣೆ, ಪ್ರೀತಿ ಕೊಟ್ಟರೆ ಒಳ್ಳೆಯ ಜೀವನ ಮಾಡಲು ಸಾಧ್ಯವಾಗುತ್ತದೆ. ನನ್ನ ವ್ಯಸನದ ಸಮಸ್ಯೆಯನ್ನು ಶ್ರೀ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಅವರಿಗೆ ತಿಳಿಸಿದಾಗ ನನಗೆ ಅವರು ಸರಿಯಾದ ಮಾರ್ಗದರ್ಶನ ಮಾಡಿದರು.ನೀನು ವ್ಯಸನಕ್ಕೆ ದಾಸನಾಗಿರದಿದ್ದರೆ ಈ ಸಂಸ್ಥೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಅದರಿಂದ ಹಿಂದೆ ಆಗಿದ್ದನ್ನು ಮರೆತು ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸು ಎಂದು ಆಶೀರ್ವದಿಸಿದರು. ಅವರ ಆಶೀರ್ವಾದ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬಸವಮಾರ್ಗ ಫೌಂಡೇಶನ್ ಸಮಾಜ ಸೇವೆಗೆ ತನ್ನನ್ನು ತಾವು ಅರ್ಪಿಸಿಕೊಂಡಿದೆ. ವ್ಯಸನಮುಕ್ತ ಸಮಾಜಕ್ಕೆ ದುಡಿಯುತ್ತಿದೆ ಎಂದು ತಿಳಿಸಿದರು.