ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಸವಾದಿ ಶರಣರು ಕಾಯಕ ಮಾಡುತ್ತ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಪರಿಕಲ್ಪನೆಯ ಸಮಾನತೆಯ ಸಂದೇಶ ಸಾರಿ ವಚನಗಳನ್ನು ರಚಿಸಿದರೆಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು ಹೇಳಿದರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕತೃ ಮುರಿಗಿ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಶನಿವಾರ ನಡೆದ ವಚನ ಕಾರ್ತಿಕ ಮಹೋತ್ಸವದ 2ನೇ ದಿನದ ಶರಣ ಘಟ್ಟಿವಾಳಯ್ಯ ಮತ್ತು ಶರಣ ಹೆಂಡದ ಮಾರಯ್ಯನವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ಎಲ್ಲಾ ಪಶು ಪಕ್ಷಿ ಪ್ರಾಣಿಗಳನ್ನು ಬಳಸಿಕೊಂಡು ಮನುಷ್ಯರ ವರ್ತನೆಗಳನ್ನು ತಿದ್ದುವ ಕೆಲಸವನ್ನು ಹನ್ನೆರಡನೆಯ ಶತಮಾನದ ಶಿವಶರಣರು ಮಾಡಿದರು ಎಂದರು.
ಶರಣರು ತಮ್ಮ ವಚನಗಳಲ್ಲಿ ಮನುಷ್ಯನ ಅಂತರಂಗದ ಶುದ್ಧಿಯನ್ನಷ್ಟೇ ಹೇಳದೆ ಬಹಿರಂಗದ ಶುದ್ಧಿಯನ್ನು ತಿಳಿಸಿದ್ದಾರೆ. ಶರಣರಿಗೆ ಪ್ರಕೃತಿ ಬಹುದೊಡ್ಡ ಉಪಮೇಯವಾಗಿ ತೋರಿತು. ಆದರೆ ಮನುಷ್ಯನ ದುರಾಸೆಗೆ ಇಂದು ಮಿತಿಯೇ ಇಲ್ಲದಾಗಿದೆ. ನಾನೆಂಬ ಅಹಂಕಾರವನ್ನು ಮೊದಲು ಅವನು ಕಳೆಯಬೇಕು. ಇಲ್ಲವಾದಲ್ಲಿ ಅವನೇ ನಾಶವಾಗುತ್ತಾನೆ ಎಂದರು.ಶಿವಶರಣ ಘಟ್ಟಿವಾಳಯ್ಯನವರ ಕುರಿತು ಮಾತನಾಡಿದ ಚುಟುಕು ಸಾಹಿತಿ ವಿನಾಯಕ ಆರ್.ಜೆ. , ಹನ್ನೆರಡನೆಯ ಶತಮಾನದ ಶಿವಶರಣರು ಕತ್ತಲೆಯನ್ನು ನೀಗಿಸುವಂತಹ ಪ್ರಯತ್ನ ಮಾಡಿದರು. ಕನ್ನಡ ನಾಡು ನುಡಿಗೆ ಶರಣರ ಕೊಡುಗೆ ಅಪಾರವಾದುದು. ಅಂತಹ ಶರಣ ಗಣದಲ್ಲಿ ಅಪರೂಪದ ಶರಣರು ಘಟ್ಟಿವಾಳಯ್ಯ. ಬಸವ, ಅಲ್ಲಮರ ಸಮಕಾಲೀನರು. ನಿಷ್ಠೆಯಲ್ಲಿ ಶರಣ ತತ್ವವಿದೆ ಎಂದು ನಂಬಿ ಬದುಕಿದವರು ಎಂದರು.
ಶಿವಶರಣ ಹೆಂಡದ ಮಾರಯ್ಯನವರ ಕುರಿತು ಮಾತನಾಡಿದ ಡಾ.ಬಿ.ಟಿ ಲೋಲಾಕ್ಷಮ್ಮ, ಹೆಂಡವನ್ನು ಮಾರುವ ಕಾಯಕ ನಿರ್ವಹಿಸುತ್ತಿದ್ದ ಮಾರಯ್ಯ ಹೆಂಡ ಕುಡಿದು ತೂರಾಡುವ ಜನರನ್ನು ಕಂಡು ಸಮಾಜಮುಖಿಯಾಗಿ ಯೋಚಿಸುತ್ತಾನೆ. ಬಸವಣ್ಣನವರ ವಿಚಾರಧಾರೆಗಳಿಗೆ ಒಳಗಾಗಿ ತನ್ನ ಹೆಂಡ ಮಾರಾಟದ ವಿಧಿ ವಿಧಾನಗಳನ್ನೇ ಬದಲಾಯಿಸಿಕೊಳ್ಳುತ್ತಾನೆ. ಹೆಂಡದ ಬದಲಾಗಿ ತಂಪು ಪಾನೀಯಗಳನ್ನು ಮಾರಾಟ ಮಾಡುವ ಕೆಲಸವನ್ನು ಕೈಗೊಳ್ಳುತ್ತಾನೆ. ಹಾಗಾಗಿ ನಾವು ಕೂಡ ಕೇವಲ ಕಂಡ ಮಾತ್ರಕ್ಕೆ ಕೇಳಿದ ಮಾತ್ರಕ್ಕೆ ಬದಲಾಗಲು ಸಾಧ್ಯವಿಲ್ಲ. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಪ್ರಪಂಚದ ಎಲ್ಲಾ ಸಾಹಿತ್ಯವನ್ನು ಒಂದು ತಕ್ಕಡಿಗೆ ಹಾಕಿದರೆ ಹನ್ನೆರಡನೆಯ ಶತಮಾನದ ಶಿವಶರಣರ ವಚನ ಸಾಹಿತ್ಯವನ್ನು ಒಂದು ತಕ್ಕಡಿಗೆ ಹಾಕಿ ತೂಗಿದರೂ ವಚನ ಸಾಹಿತ್ಯ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಜಗತ್ತಿನ ಮೊದಲ ಸಂಸತ್ ಭವನ 12ನೇ ಶತಮಾನದ ಅನುಭವ ಮಂಟಪವಾಗಿದೆ. ಮೊದಲ ಸಂವಿಧಾನ ಶರಣರ ವಚನಗಳೇ ಆಗಿವೆ. ಆ ಕಾರಣಕ್ಕಾಗಿ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಹರಗುರು ಚರಮೂರ್ತಿಗಳು, ಶ್ರೀಮಠದ ಸಾಧಕರು, ವಿದ್ಯಾಪೀಠದ ಶೈಕ್ಷಣಿಕ ಅಧಿಕಾರಿ ಎನ್.ಚೆಲುವರಾಜ್, ಡಾ.ಮೋಹನ್, ಎಸ್ ಜೆಎಂ ವಿದ್ಯಾಪೀಠದ ನೌಕರ ವರ್ಗದವರು, ಶ್ರೀಮಠದ ಭಕ್ತರು ಭಾಗವಹಿಸಿದ್ದರು. ಬಸವರಾಜ ಕಟ್ಟಿ ಪ್ರಾರ್ಥಿಸಿದರು. ಪ್ರತಿಮಾ ಜೆ. ಸ್ವಾಗತಿಸಿದರು. ಲಿಂಗರಾಜು ನಿರೂಪಿಸಿದರು. ಮೋಹನ್ ಶರಣು ಸಮರ್ಪಿಸಿದರು. ಭುವನ್ ಮತ್ತು ಸುಮಂತ್ ವಚನ ಪಠಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))