ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
೧೨ನೇ ಶತಮಾತನದಲ್ಲಿ ಶರಣರು ನೀಡಿದ ಸಾಹಿತ್ಯ ಕೊಡುಗೆ ಮತ್ತು ಸಂಸ್ಕೃತಿ ನಾವೆಲ್ಲ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಮ್ಮೇಳನ ಸರ್ವಾಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್. ಅಪ್ಪ ಅಭಿಪ್ರಾಯಪಟ್ಟರು.ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನಗರದ ಲಿಂ. ಡಾ. ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರೋಟದಲ್ಲಿ ಮೆರವಣಿಗೆಯಲ್ಲಿ ಶರಣರ ವಚನ ಕಟ್ಟುಗಳ ಪ್ರದರ್ಶನ, ಮಹಿಳೆಯರ ಕುಂಭ ಕಳಸ, ಗೊಂಬೆ ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ನೃತ್ಯ ನೋಡಿದರೆ ಇಂದಿನ ಆಧುನಿಕ ಯುಗದಲ್ಲಿಯೂ ಕಲೆ, ಸಂಸ್ಕೃತಿ ಉಳಿಸಿಕೊಂಡು ಹೋಗುತ್ತಿರುವುದನ್ನು ನೋಡಿ ತುಂಬಾ ಖುಷಿಯಾಯಿತು. ಈ ಸಂಸ್ಕೃತಿ ನಿರಂತರವಾಗಿರಲಿ ಎಂದರು.ಮಾಧ್ಯಮ ಪ್ರತಿನಿಧಿಗಳಿಗೆ, ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ, ಸಾಧಕರಿಗೆ ರಾಜ್ಯ ಮಟ್ಟದ ಬಸವ ಪುರಸ್ಕಾರ, ಬಸವ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಮೊದಲ ಗೋಷ್ಠಿ ಮತ್ತು ಕವಿಗೋಷ್ಠಿ ನಡೆದ ಬಳಿಕ ಸಂಜೆ ಸಮಾರೋಪ ಸಮಾರಂಭ ನಡೆಯಿತು.
ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನದ ಮಠದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶ್ರೀನಿವಾಸ ಸರಡಗಿಯ ಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಡಾ. ರೇವಣಸಿದ್ಧ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ನೇತೃತ್ವ ವಹಿಸಿದ್ದರು.ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ಸ್ವಾಗತ ಸಮಿತಿಯ ಶಿವಕಾಂತ ಮಹಾಜನ, ಕಾರ್ಯಾಧ್ಯಕ್ಷ ದಿಲೀಪ ಆರ್. ಪಾಟೀಲ್, ಸಮ್ಮೇಳನದ ಸಂಚಾಲಕ ಪ್ರೊ ಯಶವಂತರಾಯ ಅಷ್ಠಗಿ,
ಸ್ವಾಗತ ಸಮಿತಿ ಸಂಯೋಜಕ ಮಲ್ಲಿನಾಥ ಪಾಟೀಲ್ ಕಾಳಗಿ, ಚಂದ್ರಕಾಂತ ಕಾಳಗಿ, ಸುರೇಶ ಬಡಿಗೇರ , ಅಂಬಾರಾಯ ಕೋಣೆ , ಬಸವಂತರಾಯ ಕೋಳಕೂರ್ ಇದ್ದರು.ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಪ್ರೊ.ಯಶವಂತರಾಯ ಅಷ್ಠಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಲಿಂಗಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನುಪೂರ ಸಂಸ್ಕೃತಿ, ನೃತ್ಯ ಮತ್ತು ಸಂಗೀತ ಸಂಸ್ಥೆಯ ಸೌಖ್ಯ ಪ್ರವೀಣ ಕುಲಕರ್ಣಿ ತಂಡದ ರಮ್ಯಶ್ರೀ ಮತ್ತು ಪ್ರಾರ್ಥನಾ ಅವರ ನೃತ್ಯ ರೂಪಕ ಕಣ್ಮನ ಸೆಳೆಯಿತು.ಗಮನ ಸೆಳೆದ ಸಾರೋಟದ ಮೆರವಣಿಗೆ: ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್. ಅಪ್ಪ ಅವರಿಗೆ ಬೆಳಗ್ಗೆ ಸಾರೋಟದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಎಸಿಪಿ ಡಿ.ಜಿ.ರಾಜಣ್ಣ ಚಾಲನೆ ನೀಡಿದರು. ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಿಂದ ಸಮ್ಮೇಳನದ ಸಭಾಭವನದವರೆಗೂ ಮಹಿಳೆಯರಿಂದ ಕುಂಭ ಕಳಸ ಮೆರವಣಿಗೆ ಮತ್ತು ಶರಣರ ವಚನ ಕಟ್ಟುಗಳ ಪ್ರದರ್ಶನ, ಗೊಂಬೆ ಕುಣಿತ, ವಿವಿಧ ಕಲಾ ತಂಡಗಳ ನೃತ್ಯ ಗಮನ ಸೆಳೆಯಿತು. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ರಾಷ್ಟಧ್ವಜಾರೋಹಣ ನೆರವೇರಿಸಿದರು. ಪ್ರಭು ಶ್ರೀ ತಾಯಿ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.ಶ್ರೀ ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಮತ್ತು ನೀಲಮ್ಮ ಗೌಡತಿಯವರು ತ್ರಿವಿಧ ದಾಸೋಹ ಸೇವೆ ಮಾಡುತ್ತಿದ್ದರು. ಅವರಂತೆಯೇ ಡಾ. ಶರಣಬಸವಪ್ಪ ಅಪ್ಪ ಮತ್ತು ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವನವರು ಅದನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ನಿರ್ಗತಿಕರಿಗೆ ನೆರವಾಗುತ್ತಿದ್ದಾರೆ.
- ಪ್ರಭು ಶ್ರೀ ತಾಯಿ, ಅಕ್ಕಮಹಾದೇವಿ ಆಶ್ರಮ, ಬಿದ್ದಾಪುರ