ಸಾರಾಂಶ
ಶರಣರ ಸಂದೇಶ ಸಾರುವ ವಚನಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಕಾಯಕ ಸಂಸ್ಕೃತಿಯನ್ನು ಸಾರಬೇಕಿದೆ.
ಹರಪನಹಳ್ಳಿ: ಇಂದಿನ ಬದುಕಿಗೆ ಶರಣ ಸಂಸ್ಕೃತಿ ಅತ್ಯಗತ್ಯವಾಗಿದೆ. ಮುಂದಿನ ಪೀಳಿಗೆಯ ಸುಖ ಜೀವನಕ್ಕೆ ದಾರಿದೀಪವಾಗಲಿದೆ ಎಂದು ಹೂವಿನ ಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಶಿ ಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನಡೆದ ಶ್ರೀಮತಿ ಜಿ.ನಿಂಗಮ್ಮ ಲಿಂ.ಜಿ.ನಾಗನಗೌಡ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲೆಡೆ ಶರಣ ಸಾಹಿತ್ಯ ಪ್ರಸಾರ ಮಾಡಿ ಸುಗಮ ಜೀವನಕ್ಕೆ ಅನುವು ಮಾಡಿಕೊಡಬೇಕಾಗಿದೆ. ಶರಣರ ಸಂದೇಶ ಸಾರುವ ವಚನಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಕಾಯಕ ಸಂಸ್ಕೃತಿಯನ್ನು ಸಾರಬೇಕಿದೆ ಎಂದರು.
ದತ್ತಿ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಣಾಧಿಕಾರಿ ಮೈಸೂರು ಭರಮಪ್ಪ ಮಾತನಾಡಿ, ಶರಣ ಚಳವಳಿಯು ಸರ್ವ ಜನಾಂಗದ ಅಭ್ಯುದಯಕ್ಕೆ ಕಾರಣವಾಗುವ ಮೂಲಕ ವಿಶ್ವಕ್ಕೆ ಮೊದಲ ಸಂಸತ್ತು ನೀಡಿದ ಗೌರವಕ್ಕೆ ಪಾತ್ರವಾಗಿದೆ ಎಂದರು.ಎಲ್ಲ ಸಂಸ್ಕೃತಿಯ ತೊಟ್ಟಿಲಾಗಿ ಜಗತ್ತನ್ನು ಮುನ್ನಡೆಸುವ ದಿಕ್ಸೂಚಿಯಾಗಿ, ಮಾನವರ ಅಭಿವೃದ್ಧಿಗೆ ದೂರ ದೃಷ್ಟಿ ಹೊಂದಿದ ಶರಣ ಸಂಸ್ಕೃತಿ ಇಂದಿನ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಷಣ್ಮುಖಪ್ಪ ಪೂಜಾರ್ ವಹಿಸಿದ್ದರು. ಕೆ.ಎಸ್. ವೀರಭದ್ರಪ್ಪ ಸ್ವಾಗತಿಸಿದರು. ಪ್ರಾಸ್ತಾವಿಕ ಬಣಕಾರ ರಾಜಶೇಖರ ಮಾತನಾಡಿದರು. ಎಸ್.ಎಚ್. ವಿಠೋಬಾ ವಂದಿಸಿದರು. ಕೆ.ಹನುಮಂತಪ್ಪ ನಿರೂಪಿಸಿದರು.ಬಿಜೆಪಿ ಮುಖಂಡ ಆರುಂಡಿ ನಾಗರಾಜ, ಸಾಹಿತಿ ಪಿ.ರಾಮ ನಮಲಿ, ಸಿ.ಸಿದ್ದಪ್ಪ ಬಣಕಾರ ರೇವಣ್ಣ, ಬಾಗಳಿ ಶಿವಯೋಗಿ, ಡಿ.ಶಂಕ್ರಪ್ಪ ಕೆ.ವಿಜಯಕುಮಾರ, ಪುಷ್ಪ ದಿವಾಕರ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.