ಶಿವಾನುಭವದಂತಹ ಧಾರ್ಮಿಕ ಕಾರ್ಯಕ್ರಮ ಜನರ ಮನದ ಮಲಿನ ಕಳೆದು ಶುದ್ಧರನ್ನಾಗಿ ಮಾಡುತ್ತವೆ.
ಗದಗ: 12ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಮಾರ್ಗದರ್ಶನ ಮಾಡುತ್ತಾ, ಅವರ ನೆರಳಾಗಿದ್ದಂಥವರು ಶರಣ ಹಡಪದ ಅಪ್ಪಣ್ಣನವರು ಎಂದು ಕಿತ್ತಲಿಯ ಅಭಿನವ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2809ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಶಿವಾನುಭವದಂತಹ ಧಾರ್ಮಿಕ ಕಾರ್ಯಗಳು ಜನರ ಮನದ ಮಲಿನ ಕಳೆದು ಶುದ್ಧರನ್ನಾಗಿ ಮಾಡುತ್ತವೆ. 12ನೇ ಶತಮಾನದ ಶರಣರು ಸಮಾಜದಲ್ಲಿಯ ಮೌಢ್ಯತೆಗಳನ್ನು ಕಳೆಯಲು ವಚನಗಳನ್ನು ಬರೆದು ಸಮಾನತೆಯನ್ನು ತಂದರು. ಅಂತಹ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು ಎಂದರು.ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವಿ.ಪ್ರಭು ಮಾತನಾಡಿ, ಅಪ್ಪಣ್ಣನವರು 12ನೇ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಬಸವಣ್ಣನವರ ಮೆದುಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಮೌಢ್ಯತೆಗಳನ್ನು ಕಿತ್ತೊಗೆಯಲು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದರು. ಅಂತಹ ಶರಣರ ವಾರಸುದಾರರಾದ ನಾವು ಅಪ್ಪಣ್ಣನವರ ವ್ಯಕ್ತಿತ್ವಕ್ಕೆ ಮತ್ತಷ್ಟು ಹಿರಿಮೆ- ಗರಿಮೆ ಬರುವಂತೆ ನಡೆದುಕೊಳ್ಳಬೇಕು ಎಂದರು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಮೋಹನ ಚಂದಪ್ಪನವರ ಮಾತನಾಡಿದರು. ಈ ವೇಳೆ ಧರ್ಮಗ್ರಂಥ ಪಠಣವನ್ನು ಪ್ರಣಾಳಿ ಬಾಹುಬಲಿ ಜೈನರ, ವಚನ ಚಿಂತನ ಗೌತಮಿ ಹೊಸೂರ ನೆರವೇರಿಸಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ವಚನ ಸಂಗೀತ ನೆರವೇರಿಸಿದರು. ದಾಸೋಹ ಸೇವೆಯನ್ನು ರಾಜೇಶ ಈಶ್ವರಪ್ಪ ಮಾನ್ವಿ, ವಿಜಯಕುಮಾರ ಶೆಟ್ಟರ ವಹಿಸಿಕೊಂಡಿದ್ದರು.ಹಿರಿಯ ಸಾಹಿತಿ ಡಿ.ವಿ. ಬಡಿಗೇರ, ನ್ಯಾಯವಾದಿ ಮೆಹರವಾಡೆ, ದಾನಯ್ಯ ಗಣಾಚಾರಿ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಇದ್ದರು. ವಿದ್ಯಾ ಗಂಜಿಹಾಳ ನಿರೂಪಿಸಿದರು. ಡಾ. ಉಮೇಶ ಪುರದ ನಿರೂಪಿಸಿದರು. ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ ವಂದಿಸಿದರು.