ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸವ ವಿವಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ) ತಮ್ಮದೇ ವಿವಿ ಅಂಗಳದಲ್ಲಿ ಆಯೋಜಿಸಿದ್ದ, ರಾಜ್ಯ ಮಟ್ಟದ 47ನೇ ಸರಣಿ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದಲ್ಲಿ (ಎಸ್‍ಪಿಪಿ) ದಾಖಲೆಯ ಎರಡು ಅತ್ಯುತ್ತಮ ಯೋಜನಾ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ.ವಿವಿಯ ಎಂಎಸ್‌ಸಿ ಪ್ರಾಣಿಶಾಸ್ತ್ರ ವಿಭಾಗ ವಿದ್ಯಾರ್ಥಿಗಳು ಪ್ರಾಣಿಗಳ ಮೇಲೆ ಹರಡುವ ಕೀಟ ನಿಯಂತ್ರಣಕ್ಕಾಗಿ, ಕೃಷಿ ಕ್ಷೇತ್ರಗಳಲ್ಲಿ ಹಾಗೂ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಫಿಪ್ರೋನಿಲ್ ರಾಸಾಯನಿಕದ ದುಷ್ಪರಿಣಾಮಗಳ ಬಗ್ಗೆ ಮಂಡಿಸಿದ ಸಂಶೋಧನಾ ಯೋಜನೆಗಾಗಿ ಬಹುಮಾನ ಪಡೆಯಲಿದ್ದಾರೆ.
ಎಂಎಸ್ಸಿ (ಪ್ರಾಣಿಶಾಸ್ತ್ರ) ವಿಭಾಗದ ವಿದ್ಯಾರ್ಥಿಗಳಾದ ಹಧಿಕಾ ಸುಮೇರಾ, ತನುಜಾ ಹಿರೋಳ್ಳಿ, ನವೀನ್ ಕುಮಾರ್ ಸಿಂದಗಿ ಮತ್ತು ಸಮೀರ್ ಪರಪರೋಶ್ ಅವರ ನಾಲ್ಕು ಸದಸ್ಯರ ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಯೋಜನಾ ಪ್ರಶಸ್ತಿ ಗಿಟ್ಟಿಸಿದೆ.ಮಾರ್ಗದರ್ಶಕರಾದ ವಿಶ್ವಜಿತ್ ಬಿ ದಾರೆಕರ್ , ಬಸವರಾಜೇಶ್ವರಿ ಇಂದೂರ್ ಅವರು, ಈ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು, ಬೆಂಗಳೂರಿನ ಐಐಎಸ್‍ಸಿಯ ಸಹಯೋಗದೊಂದಿಗೆ ನ್ಯೂರೋ ಸಿಸ್ಟಮ್ ಮತ್ತು ನಡವಳಿಕೆಯ ಅಂಶಗಳಲ್ಲಿ ಫಿಪ್ರೊನಿಲ್ ಬಳಕೆಯ ಪರಿಣಾಮವನ್ನು ಸಂಶೋಧಿಸಲು ಜೀನೋಮಿಕ್ ಅಧ್ಯಯನ ನಡೆಸಲಾಗುವುದು ಎಂದು ಹೇಳಿದ್ದಾರೆ.
ಗಮನ ಸೆಳೆದ ಹ್ಯಾಂಡ್ ಸ್ಯಾನಿಟೈಜರ್: ಇದೇ ವಿವಿಯ ಎಂ.ಟೆಕ್ (ಡಿಜಿಟಲ್ ಕಮ್ಯುನಿಕೇಷನ್ ಮತ್ತು ನೆಟ್‍ವರ್ಕ್) 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ಪ್ರತೀಕ್ಷಾ ಮಾನೆ ಅವರು ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ವಯಂಚಾಲಿತ ಮಂಜು ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ನಿರ್ಮಿಸಿದ್ದರು. ಇದು ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ವಿದ್ಯಾರ್ಥಿಯು ರೂಪಿಸಿದ ತಂತ್ರಜ್ಞಾನವು ಲಭ್ಯವಿರುವ ದ್ರವ ಮತ್ತು ಪೇಸ್ಟ್ ಆಧಾರಿತ ಸ್ಯಾನಿಟೈಸರ್ ಅನ್ನು ಬಳಸಿ ಕೈಗಳನ್ನು ಸ್ಯಾನಿಟೈಜ್ ಮಾಡಲು ಸ್ವಲ್ಪ ನೀರನ್ನು ತುಂಬಿಸುವ ಮೂಲಕ ಅದನ್ನು ಮಂಜಾಗಿ ಪರಿವರ್ತಿಸುತ್ತದೆ.ಈ ಯೋಜನೆಯು ವ್ಯಾಪಕ ಬಳಕೆಗಾಗಿ ಅದರ ಸರಳ ತಂತ್ರಜ್ಞಾನಕ್ಕಾಗಿ ವಿವಿಧ ಪ್ರಮುಖ ಸಂಸ್ಥೆಗಳಿಂದ ಹಾಗೂ ಪರಿಣಿತರಿಂದ ಪ್ರಶಂಸೆಯನ್ನು ಪಡೆಯಿತು. 1000 ರುಪಾಯಿ ವೆಚ್ಚದಲ್ಲಿ ತಯಾರಿಸಲಾದ ಈ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಸಿನಿಮಾ ಹಾಲ್‍ಗಳು, ಫಂಕ್ಷನ್ ಹಾಲ್‍ಗಳು ಮತ್ತು ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುವ ಸ್ಥಳಗಳಲ್ಲಿ ಅಳವಡಿಸಬಹುದಾಗಿದೆ. ಸೌರ ಫಲಕಗಳನ್ನು ಬಳಸುವ ಅದೇ ಸ್ಯಾನಿಟೈಸರ್‌ನ ಬೆಲೆ ಸ್ವಲ್ಪ ಹೆಚ್ಚಾಗಿರಲಿದೆ.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವನಿತಾ ಕಾಬಾ, ಲಕ್ಷ್ಮಿ ಪಾಟೀಲ್ ಮಾರ್ಗದರ್ಶಕ-ಶಿಕ್ಷಕರಾಗಿದ್ದಾರೆ.