ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿಪಿಎಸ್ಐ ಪರಶುರಾಮ್ ಶಂಕಾಸ್ಪದ ಸಾವಿನ ಪ್ರಕರಣದ ಆರೋಪಿಗಳಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಸನ್ನೀಗೌಡ ಅವರನ್ನು ಬಂಧಿಸದಿದ್ದರೆ ಆ.15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಧ್ವಜಾರೋಹಣಕ್ಕೆಂದು ಆಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ-ಪ್ರಗತಿಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿವೆ. ಇದಕ್ಕೆ ಒಂದು ದಿನದ ಮುಂಚೆ ಆ.14 ರಂದು ಬೆಳಿಗ್ಗೆ ನಗರದ ಮೈಲಾಪೂರ ಬೇಸ್‌ನಿಂದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲು ಒಕ್ಕೂಟ ನಿರ್ಧರಿಸಿದೆ. ಈ ಬೆನ್ನಲ್ಲೇ, ಇದೇ ವಿಷಯ ಮುಂದಿಟ್ಟುಕೊಂಡು ಹಾಗೂ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ, ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಆ.13 ರಂದು ಜಿಲ್ಲಾ ಬಿಜೆಪಿ ಯಾದಗಿರಿಯಲ್ಲಿ ಪ್ರತಿಭಟನೆ ಆಯೋಜಿಸಿದೆ. ಭಾನುವಾರ ಡಾ. ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡ ದಲಿತ- ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸಭೆ ನಡೆಸಿ, ಪ್ರತಿಭಟನೆ, ಘೇರಾವ್ ಹಾಗೂ ಬಂದ್ ಕರೆ ಕುರಿತು ಚರ್ಚಿಸಿದರು. ಶಾಸಕ ತುನ್ನೂರು ಹಾಗೂ ಪುತ್ರ ಪಂಪನಗೌಡ ಬಂಧಿಸುವಂತೆ ಆಗ್ರಹಿಸಿದರು. ದಸಂಸ ಮರೆಪ್ಪ ಚಟ್ಟೇರಕರ್, ಮಲ್ಲಿಕಾರ್ಜುನ ಕ್ರಾಂತಿ, ಕರವೇ ಭೀಮು ನಾಯಕ್, ಉಮೇಶ ಮುದ್ನಾಳ್, ಗೌತಮ್ ಕ್ರಾಂತಿ, ನಿಂಗಪ್ಪ, ಪ್ರಭು ಬುಕ್ಕನ್, ತಂಜುಮ್ಮುಲ್, ಶ್ರೀಕಾಂತ ಸುಂಗಲ್ಕರ್, ಮಲ್ಲಿಕಾರ್ಜುನ ಪೂಜಾರಿ, ಸಂತೋಷ್ ನಿರ್ಮಲಕರ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
----ಯಾದಗಿರಿ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಭೆ ನಡೆಸಿದರು.---000---