ಅಕ್ಕನ ಮಾತು ಪಾಂಡಿತ್ಯದ ಪ್ರದರ್ಶನ ಆಗಿರದೇ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯಿತ್ರಿ ಅನುಭಾವಿ, ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದ ಧ್ರುವತಾರೆಯಾಗಿದ್ದಾಳೆ.
ಗದಗ: ಅಕ್ಕಮಹಾದೇವಿ ಆಧ್ಯಾತ್ಮಿಕ ಸ್ವಾತಂತ್ರ್ಯದ ಸಂಕೇತ. ಅವರ ವಚನಗಳು ಕನ್ನಡ ಸಾಹಿತ್ಯದ ಅತ್ಯುನ್ನತ ಅನುಭಾವ ಕಾವ್ಯಗಳಾಗಿದ್ದು, ಅವು ವೈರಾಗ್ಯ ಭಕ್ತಿ ಮತ್ತು ಸ್ತ್ರೀವಾದದ ಮಿಶ್ರಣವಾಗಿವೆ. ಆಕೆಯ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿವೆ ಎಂದು ಸಿದ್ದಲಿಂಗ ನಗರ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಎಸ್.ಆರ್. ಹನುಮಗೌಡರ ತಿಳಿಸಿದರು.
ತಾಲೂಕು ಕದಳಿ ಮಹಿಳಾ ವೇದಿಕೆಯ ವತಿಯಿಂದ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಬುದ್ಧಿಗಿಂತ ಭಾವಕ್ಕೆ, ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.ಅಕ್ಕನ ಮಾತು ಪಾಂಡಿತ್ಯದ ಪ್ರದರ್ಶನ ಆಗಿರದೇ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯಿತ್ರಿ ಅನುಭಾವಿ, ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದ ಧ್ರುವತಾರೆಯಾಗಿದ್ದಾಳೆ. 12ನೇ ಶತಮಾನದಲ್ಲಿಯೇ ಪುರುಷ ಪ್ರಧಾನ ಸಮಾಜವನ್ನು ಅಳಿಸಿ ಹಾಕಬೇಕು, ಮಹಿಳೆಗೆ ಸಮಾನ ಸ್ಥಾನ ಕೊಡಬೇಕು, ಲಿಂಗ ತಾರತಮ್ಯ ಹೋರಾಟ ಕೇವಲ ತನಗಾಗಿ ಅಲ್ಲ, ಇಡೀ ಹೆಣ್ಣು ಸಂಕುಲಕ್ಕಾಗಿಯೇ ಎಂದು ಸಾರಿದ್ದಾರೆ ಎಂದರು. ಡಾ. ದೀಪಾ ಮೂರಶಿಳ್ಳಿನ ಮಾತನಾಡಿ, ಮಹಿಳೆಯರು ಕುಟುಂಬದ ತಳಹದಿಯಾಗಿರುವುದರಿಂದ ಅವರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಇಡೀ ಕುಟುಂಬದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯ ಎಂದರು.
ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಅಧ್ಯಕ್ಷತೆಯನ್ನು ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಲೋಚನಾ ಐಹೊಳ್ಳಿ ವಹಿಸಿದ್ದರು. ದೀಪಾ ಪಟ್ಟಣಶೆಟ್ಟಿ ಮಾತನಾಡಿದರು.ಸುನಂದಾ ಜ್ಯಾನೋಪಂತರ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಪುಷ್ಪಾ ಭಂಡಾರಿ ಸ್ವಾಗತಿಸಿದರು. ಕಲಾವತಿ ಹನುಮಂತಗೌಡರ ನಿರೂಪಿಸಿದರು. ಜಯಶ್ರೀ ವಸ್ತ್ರದ ವಂದಿಸಿದರು. ಕಾರ್ಯಕ್ರಮದಲ್ಲಿ ಸುಶಿಲಾ ಕೋಟಿ, ಸಂಧ್ಯಾ ಕೋಟಿ, ಮೀನಾಕ್ಷಿ ಕೊರವನ್ನವರ, ಕಸ್ತೂರಿ ಮುಂದಿನಮನಿ, ಜಯಶ್ರೀ ದಾವಣಗೇರಿ, ಕವಿತಾ ಮರಿಗೌಡರ, ಶೋಭಾ ಬಾಂಡಗೆ, ವಿಜಯಾ ಚೆನ್ನಶೆಟ್ಟಿ, ಜ್ಯೋತಿ ಜಾನೋಪಂತರ, ಪ್ರತಿಭಾ ಇನಾಮತಿ, ವಿಜಯಾ ಕುಲಕರ್ಣಿ, ಅನ್ನಪೂರ್ಣ ಅಸೂಟಿ, ಕಸ್ತೂರಿ ಮರಿಗೌಡರ, ಗೌರಿ ಜೀರಂಕಳಿ ಮತ್ತಿತರರು ಉಪಸ್ಥಿತರಿದ್ದರು.