ಸಾರಾಂಶ
ಕಾರಟಗಿ: ವೈಚಾರಿಕತೆ, ವೈಜ್ಞಾನಿಕ ಹಾದಿಯ ಮೂಲಕ ಕರ್ನಾಟಕದಲ್ಲಿ ಒಂದು ಪೀಳಿಗೆಯನ್ನೇ ಪ್ರಭಾವಿಸಿದ ಮಹಾನ್ ವ್ಯಕ್ತಿ, ಯುಗದ ಕವಿ ಎನ್ನಿಸಿಕೊಂಡವರು ಕುವೆಂಪು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ಹೇಳಿದರು.ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲೆಯಲ್ಲಿ ಕಸಾಪ ಘಟಕ ‘ಕನ್ನಡ ಕಾರ್ತಿಕೋತ್ಸವ ಉಪನ್ಯಾಸ ಮಾಲಿಕೆಯಲ್ಲಿ ‘ಕುವೆಂಪು ವಿಚಾರ ದರ್ಶನ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕುವೆಂಪು ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೇ ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿಯನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಎಂದು ಬಣ್ಣಿಸಿದರು.ಇನ್ನು ಜಿಲ್ಲೆಯಲ್ಲಿ ಕಸಾಪ ಅತ್ಯಂತ ಸಕ್ರಿಯವಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿದೆ. ಕೇವಲ ಸಾಹಿತಿಗಳಿಗೆ ಮೀಸಲಾಗಿದ್ದ ಪರಿಷತ್ ಇಂದು ಜಿಲ್ಲೆಯಲ್ಲಿ ಪ್ರತಿ ಕನ್ನಡಿಗರ ಮನೆ ಮನ ತಲುಪಿದೆ. ಕಾವ್ಯ ಕಮ್ಮಟ, ಕವಿಗೋಷ್ಠಿ, ವಿದ್ಯಾರ್ಥಿಗಳಿಗೆ ಸಾಹಿತಿಕ, ಪುಸಕ್ತ ಅವಲೋಕನದಂಥ ಕಾರ್ಯಕ್ರಮಗಳನ್ನು ನಡೆಸುತ್ತ ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಸಾಹಿತ್ಯಕ್ಕೆ ವಿದ್ಯಾರ್ಥಿಗಳ ಕೊಡುವೆ ನೀಡುವ ಮಟ್ಟಕ್ಕೆ ಬೆಳೆಯುತ್ತಿದೆ ಎಂದರು.ಜಿಲ್ಲೆಯ ಎಲ್ಲ ತಾಲೂಕು ಘಟಕಗಳು ಸಕ್ರಿಯವಾಗಿ ದುಡಿಯುತ್ತಿವೆ. ಕಸಾಪ ಪ್ರತಿಯೊಬ್ಬರನ್ನು ತಲುಪುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಘಟಕಗಳಿಂದ ಎಲ್ಲೆಡೆ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೆಪಿಎಸ್ ಪ್ರೌಢಶಾಲೆಯ ಉಪ ಪ್ರಾಚಾರ್ಯ ಶರಣಪ್ಪ ಸೋಮಲಾಪುರ ಮಾತನಾಡಿ, ಕುವೆಂಪು ಕನ್ನಡನಾಡಿನ ಸಾಕ್ಷಿ ಪ್ರಜ್ಞೆಯಾಗಿ ಬೆಳೆದು ನಿಂತಿದ್ದ ಸಾಹಿತ್ಯಿಕ ದೈತ್ಯ ಪ್ರತಿಭೆ. ತಮ್ಮ ಜೀವನದುದ್ದಕ್ಕೂ ಮೌಢ್ಯ, ಕಂದಾಚಾರಗಳನ್ನು ವಿರೋಧಿಸಿಕೊಂಡು ಬಂದ ಅವರು ಮೌಢ್ಯದಿಂದ ಹೊರ ಬಾರದ ಹೊರತು ಅಭಿವೃದ್ಧಿ ಇಲ್ಲ. ವೈಜ್ಞಾನಿಕ ಜೀವನ ಮಾರ್ಗವೇ ನಮ್ಮ ಬಡತನ, ದಾರಿದ್ರ್ಯವನ್ನು ಹೋಗಲಾಡಿಸುತ್ತದೆ ಎನ್ನುವ ಮೇಲ್ಪಂಕ್ತಿ ಹಾಕಿಕೊಟ್ಟ ದಾರ್ಶನಿಕ ಚಿಂತಕರಾಗಿದ್ದರು ಎಂದರು.ಇಲ್ಲಿನ ಸಿ.ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಹನುಮಂತಪ್ಪ ಚಂದಲಾಪುರ ಕುವೆಂಪು ವಿಚಾರ ಕುರಿತು ಉಪನ್ಯಾಸ ನೀಡಿದರು.ನ್ಯಾಯವಾದಿ ಸೋಮನಾಥ ದೊಡ್ಡಮನಿ, ಖಜಾನೆ ಅಧಿಕಾರಿ ಹನುಮಂತಪ್ಪ ತೊಂಡಿಹಾಳ, ಮಂಜುನಾಥ ಮಸ್ಕಿ, ಎಂ.ಅಮರೇಶಗೌಡ, ಶಿಕ್ಷಕರಾದ ರಾಜಶೇಖರ ರ್‍ಯಾವಳದ, ಎನ್.ಜೆ. ವಿಜಯಕುಮಾರ, ಶಿವಾನಂದ ಪಾಟೀಲ್, ದಾಕ್ಷಾಯಿಣಿ, ಶಿಕ್ಷಕಿ ಆರ್. ಶಕುಂತಲಾ ಇದ್ದರು. ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುರಪ್ಪಯ್ಯ ಹಿರೇಮಠ. ಸಂತೋಷ ಬಿ., ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.