ಸಾರಾಂಶ
ಗದಗ: ಅ.3 ರಿಂದ 12ರ ವರೆಗೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ, ದಸರಾ ಧರ್ಮ ಸಮ್ಮೇಳನ ಜರುಗಲಿದೆ ಎಂದು ಸ್ವಾಗತ ಸಮಿತಿ ಗೌರವ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.3 ರಂದು ಸಂಜೆ 7ಕ್ಕೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟನೆ ಜರುಗಲಿದ್ದು, ಸಾನ್ನಿಧ್ಯವನ್ನು ರಂಭಾಪುರಿ ಶ್ರೀಗಳು ವಹಿಸುವರು.ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ಅತಿಥಿಗಳಾಗಿ ಹಲವಾರು ಹಿರಿಯ ಮುಖಂಡರು ಭಾಗವಹಿಸುವರು. ವಿಶೇಷ ಉಪನ್ಯಾಸ, ಗೌರವ ರಕ್ಷೆ, ಗುರು ರಕ್ಷೆ ಕಾರ್ಯಕ್ರಮಗಳು ಜರುಗಲಿವೆ.
ಅ. 4 ರಂದು ಸಂಜೆ 7 ಕ್ಕೆ ರಂಭಾಪುರಿ ಬೆಳಗು ಬಿಡುಗಡೆ ಜರುಗಲಿದ್ದು, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಚಿತ್ರನಟ ದೊಡ್ಡಣ್ಣ ಆಗಮಿಸುವರು.ಅ. 6 ರಂದು ಜರುಗುವ ಕಾರ್ಯಕ್ರಮದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ, ಪದ್ಮಶ್ರೀ ವಿಜಯ ಸಂಕೇಶ್ವರ ಭಾಗವಹಿಸುವರು. ಅ.7ರ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಅರಣ್ಯ ಸಚಿವ ಈಶ್ವರ ಖಂಡ್ರೆ ಭಾಗವಹಿಸುವರು. ಅ.12 ರಂದು ಸಂಜೆ 4.30 ಕ್ಕೆ ವಿಜಯ ದಶಮಿಯ ಶಮೀಸೀಮೋಲಂಘನ, ಸಿಂಹಾಲನಾರೋಹಣ, ಶಾಂತಿ ಸಂದೇಶ ಕಾರ್ಯಕ್ರಮ ಜರುಗಲಿದೆ ಎಂದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬ್ಬಿಗೇರಿ ಹಿರೇಮಠ ಮತ್ತು ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಕೃಷಿ ಮೇಳ, ಉಚಿತ ಆರೋಗ್ಯ ತಪಾಸಣೆ, ಮಕ್ಕಳ ಆರೋಗ್ಯ, ಕಣ್ಣಿನ ತಪಾಸಣೆ ಸುಸಜ್ಜಿತವಾದ ತಾತ್ಕಾಲಿಕ ಆಸ್ಪತ್ರೆ ಸ್ಥಾಪನೆ ಮಾಡಲಾಗಿದೆ. ಪ್ರತಿ ದಿನವೂ 25 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲು ನಿರೀಕ್ಷೆ ಇದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ನರೇಗಲ್ಲ ಪಟ್ಟಣದ ಮಲ್ಲಿಕಾರ್ಜುನ ಶಿವಾಚಾರ್ಯರು, ಚಂದ್ರು ಬಾಳಿಹಳ್ಳಿಮಠ, ವಿರೇಶ ಕೂಗು, ವೀರಯ್ಯ ಸೋಮನಕಟ್ಟಿಮಠ ಮುಂತಾದವರು ಹಾಜರಿದ್ದರು.