ಕಾಮನ್‌ ಪುಟಕ್ಕೆವಚನಗಳಲ್ಲಿ ಶರಣರ ಸತ್ಯದರ್ಶನವಿದೆ

| Published : Feb 22 2025, 12:46 AM IST

ಸಾರಾಂಶ

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಂಸ್ಕಾರವಂತರಾಗಿ ರೂಪುಗೊಳ್ಳಬಹುದು

ಕನ್ನಡಪ್ರಭ ವಾರ್ತೆ ಮೈಸೂರು

ವಚನಗಳಲ್ಲಿ ಸತ್ಯದರ್ಶನವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಿವೃತ್ತ ನ್ಯಾ. ಅರಳಿ ನಾಗರಾಜ ಅವರ ದತ್ತಿ ಅಂಗವಾಗಿ ನಂಜನಗೂಡು ತಾಲೂಕು ಶಿರಮಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 24ನೇ ವಚನ ಗ್ರಾಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಂಸ್ಕಾರವಂತರಾಗಿ ರೂಪುಗೊಳ್ಳಬಹುದು. ವಚನಗಳಲ್ಲಿ ಲೌಕಿಕ, ಅಲೌಕಿಕ ಕಳೆಗೊಳಿಸುವ ಕಾಂತಿ, ಕಾಯಕ ನಿರ್ದೇಶನ, ಸಮಾನತೆಯ ಪರಿಶುದ್ಧತೆ ಅಡಕವಾಗಿದೆ ಎಂದರು.

ಗ್ರಾಮದ ಪ್ರತಿ ಮನೆ ಮನಗಳಲ್ಲಿ ಅಂತಹ ವಚನ ಪುಸ್ತಕ ಇರಬೇಕು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ ಮನೆಮನೆಗೆ ವಚನಪುಸ್ತಕ ಹಂಚಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿಸುತ್ತಿರುವುದರ ಜೊತೆಗೆ ಕನ್ನಡವನ್ನು ಕಟ್ಟುವ ಕೆಲವನ್ನು ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ಅವರು ಹೇಳಿದರು.

ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಕಾಲ ಮೇಲೆ ಕೈಯನೂರಿ ಕೋಲು ಹಿಡಿಯದ ಮುನ್ನ ಪೂಜಿಸು ಕೂಡಲಸಂಗಮದೇವನ ಎಂಬ ವಿಶ್ವಗುರು ಬಸವಣ್ಣನವರ ವಚನದಂತೆ ನಾವು ವಯಸ್ಸಾದ ಮೇಲೆ ನೂರು ಸಲ ಪರಶಿವನ ನೆನೆಯುವುದಕ್ಕಿಂತ ವಯಸ್ಸಿರುವಾಗ ಕೇವಲ ಮೂರು ಸಲ ನೆನೆದರೂ ಪರಮಾತ್ಮನ ಕೃಪೆಗೆ ಪಾತ್ರರಾಗುತ್ತೇವೆ. ವಚನಗಳು ಸಾಮಾನ್ಯರಿಗೆ ಆದೇಶವಾದರೆ, ಸಾಧಕರಿಗೆ ಉಪದೇಶ, ಸಿದ್ಧಪುರುಷರಿಗೆ ರಸದೌತಣವಾಗಿವೆ ಎಂದರು.

ಶಿರಮಳ್ಳಿ ಶ್ರೀ ಇಮ್ಮಡಿ ಮುರುಗೀಸ್ವಾಮಿಗಳು ಮಾತನಾಡಿ, ಶರಣರ ಒಂದೊಂದು ವಚನವೂ ಕೂಡಾ ಸೂರ್ಯನ ಪ್ರಕಾಶದಂತೆ ಇದ್ದು ಸನ್ನಡತೆ ಮತ್ತು ಸದ್ವಿಚಾರ ಮೈಗೂಡಿಸಿಕೊಂಡು ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ನೆರವಾಗುತ್ತವೆ. ಗ್ರಾಮಗಳಲ್ಲಿ ಸುಮಧುರ ಬಾಂಧವ್ಯ ನಿರ್ಮಾಣವಾಗಲು ವಚನ ಗ್ರಾಮ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಬಳಿಕ ಶಿರಮಳ್ಳಿ ಗ್ರಾಮದ ಮನೆಮನೆಗಳಿಗೆ ವಚನಪುಸ್ತಕ ನೀಡಿ ವಚನ ಗ್ರಾಮ ಪ್ರಮಾಣಪತ್ರ ನೀಡಿ ವಚನ ಗ್ರಾಮ ಎಂದು ಘೋಷಿಸಲಾಯಿತು.

ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ನಂಜನಗೂಡು ಅಧ್ಯಕ್ಷ ಕಣೇನೂರು ನಾಗೇಶಮೂರ್ತಿ, ಗೌಡಿಕೆ ರಾಜಶೇಖರಮೂರ್ತಿ ಇದ್ದರು.