ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ತಾಯಿ ಹಾಲಿನೊಂದಿಗೆ ಬಂದ ತೊಟ್ಟಿಲ ಭಾಷೆ ಹೃದಯ ಭಾಷೆಯಾಗಿ ಪ್ರಬಲ ಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದು ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.ಇಲ್ಲಿನ ಟಿವಿವಿ ಬಿಎಡ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾತೃಭಾಷಾ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು. ಮಾತೃಭಾಷೆ ಇಡೀ ಜಗತ್ತಿಗೆ ನಮ್ಮ ಅಸ್ತಿತ್ವವನ್ನು ಪರಿಚಯಿಸುತ್ತದೆ. ಭಾಷೆ ಬದುಕು ಬೇರೆ ಬೇರೆ ಅಲ್ಲ, ಬದುಕು ಸಮೃದ್ಧವಾಗಿದ್ದರೆ ಭಾಷೆ ಭದ್ರವಾಗಿರುತ್ತದೆ. ಮನದೊಳಗಣ ಮಾತೃಭಾಷೆ ಹಿತ ಮಿತ ಹಿಗ್ಗು ತಂದು ಕೊಡುತ್ತದೆ. ಜನರ ಸಂಸ್ಕೃತಿ, ಆಚಾರ, ವಿಚಾರ ಹಿರಿದಾಗಬೇಕು ಎಂದರೆ ಮಾತೃಭಾಷೆಗೆ ಮೊದಲು ಆದ್ಯತೆ ನೀಡಬೇಕು. ಇತರೆ ಭಾಷೆಗಳನ್ನು ನಮ್ಮ ಭಾವಕೋಶಕ್ಕೆ ತಂದುಕೊಳ್ಳುವ ಸಾಮರ್ಥ್ಯವಿದ್ದು, ಎಲ್ಲ ಭಾಷೆಗಳೊಂದಿಗೆ ಬೆಳೆಯುವ ಬುದ್ಧಿ ಭಾವಗಳು ಅರಳಬೇಕು. ಜ್ಞಾನ, ಅನ್ನ ಮಾರ್ಗಗಳಿಗೆ ಮಾತೃಭಾಷೆಯೇ ಅಕ್ಷಯ ನಿಧಿ ಎಂದರು.
ಗ್ರಂಥಪಾಲಕ ನಾಗಭೂಷಣ್ ಮಾತನಾಡಿ, ಮಾತೃಭಾಷೆ ಶಿಕ್ಷಣ ಮತ್ತು ಪುಸ್ತಕಗಳ ಓದು ಮಾನಸಿಕ ವಿಕಾಸಕ್ಕೆ ಸಹಕಾರಿಯಾಗಿದೆ. ಸರಳ, ಸುಲಭ, ಸುಗಮ ಸಂವಹನಕ್ಕೆ ಮಾತೃಭಾಷೆ ತೆರೆದ ಬಾಗಿಲು ಎಂದರು.ಅಧ್ಯಕ್ಷ ವಹಿಸಿದ್ದ ಡಾ.ಶಿವಕುಮಾರ್ ಮಾತನಾಡಿ, ಮಾತೃಭಾಷೆ ಎಲ್ಲರಿಗೂ ಅರ್ಥವಾಗುವಂತಿರಬೇಕು. ಆಗ ಮಾತ್ರ ಅದು ಹೃದಯಕ್ಕೆ ಹತ್ತಿರವಾಗುತ್ತದೆ. ಬಹು ಸಂಸ್ಕೃತಿಯನ್ನು ಪೋಷಿಸುತ್ತದೆ. ತನ್ನ ಅಸ್ತಿತ್ವವವನ್ನು ಗುರುತಿಸಿಕೊಳ್ಳುತ್ತದೆ ಎಂದರು. ಉಪನ್ಯಾಸಕ ಮಂಜುಪ್ರಸಾದ್ ಮಾತನಾಡಿ, ಕನ್ನಡ ಭಾಷೆಯ ಉಗಮ, ವಿಕಾಸ ಬೆಳೆದು ಬಂದ ದಾರಿಯನ್ನು ತಿಳಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಆರ್.ವೆಂಕಟೇಶ್‌ಮೂರ್ತಿ ಕನ್ನಡ ಭಾಷೆಯ ವಿವಿಧ ಕಾಲ ಘಟ್ಟದಲ್ಲಿನ ವಿಚಾರ ಧಾರೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಇದ್ದರು.