ಸಾರಾಂಶ
ಚಾಮರಾಜನಗರ ವಿಶ್ವವಿದ್ಯಾನಿಲಯವನ್ನು ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು. ಜಿಲ್ಲೆಯ ಶೈಕ್ಷಣಿಕ ದೃಷ್ಟಿಯಿಂದ ಅದನ್ನು ಉಳಿಸಬೇಕು ಎಂದು ದಲಿತ ಮಹಾಸಭೆ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಹೇಳಿದರು.
ಚಾಮರಾಜನಗರ : ಚಾಮರಾಜನಗರ ವಿಶ್ವವಿದ್ಯಾನಿಲಯವನ್ನು ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು. ಜಿಲ್ಲೆಯ ಶೈಕ್ಷಣಿಕ ದೃಷ್ಟಿಯಿಂದ ಅದನ್ನು ಉಳಿಸಬೇಕು ಎಂದು ದಲಿತ ಮಹಾಸಭೆ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಜಿಲ್ಲೆ ಅಭಿವೃದ್ದಿ ಪಥದಲ್ಲಿ ಸಾಗಬೇಕಾದರೆ, ಅಲ್ಲಿನ ಶೈಕ್ಷಣಿಕ ವಾತಾವರಣವು ಪ್ರಧಾನ ಪಾತ್ರ ವಹಿಸುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಶೋಷಿತರು, ದಲಿತರು, ಹಿಂದುಳಿದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಶೈಕ್ಷಣಿಕ ಅಭಿವೃದ್ದಿಗಾಗಿಯೇ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಚಾಮರಾಜನಗರ ಸೇರಿದಂತೆ ೯ ಜಿಲ್ಲೆಗಳಲ್ಲಿ ಹೊಸ ವಿವಿ ನಿಲಯಗಳನ್ನು ಆರಂಭಮಾಡಿತ್ತು, ಪ್ರಸ್ತುತ ಅಧಿಕಾರದಲ್ಲಿರುವ ರಾಜ್ಯಸರ್ಕಾರ ಹಣದ ಕೊರತೆ ಹಾಗೂ ಜಾಗದ ಕೊರತೆಯ ನೆಪವೊಡ್ಡಿ, ಹೊಸ ವಿವಿ ನಿಲಯಗಳನ್ನು ಬಂದ್ ಮಾಡಲು ಮುಂದಾಗಿದೆ. ಮೊದಲೇ ಚಾಮರಾಜನಗರ ಜಿಲ್ಲೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ದಿ ಸಾಧಿಸಿಲ್ಲ, ವಿವಿ ಬಂದ್ ಮಾಡಿದರೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಮತ್ತಷ್ಟು ಕುಂಠಿತವಾಗುತ್ತದೆ ಎಂದು ಆರೋಪಿಸಿದರು.
ಚಾಮರಾಜನಗರದಲ್ಲಿ ಆರಂಭವಾಗಬೇಕಿದ್ದ ಸರ್ಕಾರಿ ಕಾನೂನು ಕಾಲೇಜು ರಾಯಚೂರು ಜಿಲ್ಲೆಗೆ ವರ್ಗಾವಣೆಯಾಗಿದೆ. ಚಾಮರಾಜನಗರ ವಿವಿಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ವಿಶ್ವವಿದ್ಯಾನಿಲಯದ ಪ್ರಗತಿಗೆ ಮುಂದಾಗಬೇಕು, ಮೈಸೂರು ವಿವಿಗೆ ಚಾಮರಾಜನಗರ ವಿವಿಯನ್ನು ವಿಲೀನಗೊಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದರು.
೬೫ ಉಪನ್ಯಾಸ ಕರು ಸೇರಿ ೧೦೦ ಜನ ಸಿಬ್ಬಂದಿ ಇದ್ದಾರೆ. ಹೆಚ್ಚು ಅನುದಾನ ನೀಡಿದರೆ ಉಳಿಯುತ್ತದೆ. ಮೆಡಿಕಲ್ ಕಾಲೇಜಿನಲ್ಲಿ ಭೋದಕ ಸಿಬ್ಬಂದಿ ಇಲ್ಲ ಅಂತ ಮೈಸೂರಿಗೆ ಸೇರಿಸಲು ಸಾಧ್ಯವೇ, ಮಾಜಿ ಸಂಸದರಾದ ಶ್ರೀನಿವಾಸ ಪ್ರಸಾದ್ ಮತ್ತು ಧ್ರುವನಾರಾಯಣ ಹಾಗೂ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಅವರಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದರು.
ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚು ಇರುವ ಈ ಜಿಲ್ಲೆಯಲ್ಲಿ, ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಕೆಲ ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸುತ್ತಾರೆ ಎಂಬದನ್ನು ಈ ವಿವಿಯಿಂದಲೇ ನಿರೂಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮೈಸೂರು ವಿವಿಗೆ ವಿಲೀನ ಮಾಡಲು ಮುಂದಾಗಿದ್ದಾರೆ. ನಮ್ಮ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂದು ಮೈಸೂರಿಗೆ ಸೇರಿಸಲು ಸಾಧ್ಯವೆ ಎಂದರು.
ಇಂದು ಅಭಿಯಾನ
ಚಾಮರಾಜನಗರ ವಿವಿಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಉಳಿಸಬೇಕು ಎಂಬ ಅಭಿಯಾನವನ್ನು ಆರಂಭಿಸಲು, ಶನಿವಾರ ಫೆ.೨೨ ರಂದು ನಗರದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ, ಪ್ರಗತಿ ಪರರು ಮತ್ತು ವಿದ್ಯಾರ್ಥಿಗಳ ಸಭೆ ಕರೆಯಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್‌ನ ಸಿ.ಎಂ.ಶಿವಣ್ಣ, ನಿಜದನಿ ಗೋವಿಂದರಾಜು, ಸಿದ್ದಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಂಗಸ್ವಾಮಿ, ಗೌರಿಶಂಕರ್, ರಾಜಣ್ಣ, ಕೆಂಪರಾಜು ಇದ್ದರು.