ಮಂಗಳೂರು: ಮಂಗಳೂರಿನ ಉದ್ಯಮಿ ಶರತ್‌ ಎಕ್ಕೂರು ಅವರು ತಮ್ಮ ಬೈಕ್‌ನಲ್ಲೇ ಯುರೋಪಿಯನ್‌ ಮತ್ತು ಗಲ್ಫ್‌ನ ಸುಮಾರು 38 ದೇಶಗಳ ಪ್ರವಾಸವನ್ನು ಭಾನುವಾರ ಮಂಗಳೂರಿನಿಂದ ಆರಂಭಿಸಿದರು.ಮಂಗಳೂರಿನ ಬಲ್ಮಠದ ಶಾಂತಿ ಕ್ಯಾಥೆಡ್ರಲ್‌ ಚರ್ಚ್‌ ಬಳಿ ಶರತ್‌ ಎಕ್ಕೂರು ಅವರ ವಿದೇಶ ಪ್ರವಾಸಕ್ಕೆ ಯೇನೆಪೋಯ ಮೆಡಿಕಲ್ ಕಾಲೇಜಿನ ಅಡ್ಮಿಷನ್‌ ಮ್ಯಾನೇಜರ್‌ ರೋನಿ ಸೋನ್ಸ್‌ ಹಾಗೂ ಏರ್‌ಪೋರ್ಟ್‌ ಚೀಫ್‌ ಡೈರೆಕ್ಟರ್‌ ಬಿನು ವರ್ಗೀಸ್‌ ಅವರು ಚಾಲನೆ ನೀಡಿ ಶುಭಹಾರೈಸಿದರು. ಪ್ರಮುಖರಾದ ಮಾಜಿ ಶಾಸಕ ಜೆ.ಆರ್‌.ಲೋಬೋ, ರೆ. ಗೋಲ್ಡಿನ್‌ ಬಂಗೇರ, ರೆ. ಸೆಬಾಸ್ಟಿಯನ್‌ ಜತ್ತನ್ನಾ, ಶರತ್‌ ಅವರ ಮನೆಯವರು, ಸ್ನೇಹಿತರು, ಸಾರ್ವಜನಿಕರು ಮತ್ತಿತರರು ಇದ್ದರು. ಮಾಲವಿಕ ಬಲ್ಮಿ ನಿರೂಪಿಸಿದರು. ಪ್ರವಾಸ ಆರಂಭಿಸಿದ ಶರತ್‌ ಅವರಿಗೆ ಮಂಗಳೂರಿನ ಬೈಕರ್‌ ಗೆಳೆಯರ ತಂಡ ಸಾಥ್‌ ನೀಡಿ ಶುಭಹಾರೈಸಿ, ಅವರನ್ನು ಬೀಳ್ಕೊಟ್ಟರು.

ಬೈಕ್‌ನಲ್ಲೇ 38 ದೇಶಗಳ ಪ್ರವಾಸ: ಶರತ್‌ ಎಕ್ಕೂರು ಅವರು ತಮ್ಮ 60ನೇ ವಯಸ್ಸಿನಲ್ಲಿ ರೋಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಯುರೋಪಿಯನ್‌ ಹಾಗೂ ಗಲ್ಫ್‌ನ ಸುಮಾರು 38 ದೇಶಗಳ ಪ್ರವಾಸ ಆರಂಭಿಸಿದ್ದು, ಮಂಗಳೂರಿನಿಂದ ಬೈಕ್‌ ಜರ್ನಿ ಆರಂಭಿಸಿದ ಅವರು ಬೆಂಗಳೂರು, ಹೈದರಾಬಾದ್‌, ಮಧ್ಯಪ್ರದೇಶ, ಉತ್ತರಪ್ರದೇಶ ಮೂಲಕ ನೇಪಾಳ ಪ್ರವೇಶಿಸಿ ಬಳಿಕ ವಿದೇಶದ ವಿವಿಧ ದೇಶಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಸುಮಾರು 5-6 ತಿಂಗಳ ಪ್ರವಾಸದಲ್ಲಿ ಅವರು ಸುಮಾರು 35-40 ಸಾವಿರ ಕಿಲೋ ಮೀಟರ್‌ ದೂರ ಪ್ರಯಾಣಿಸಲಿದ್ದಾರೆ. ಬೈಕ್‌ಗೆ ಭಾರತದ ರಾಷ್ಟ್ರಧ್ವಜ ಹಾಗೂ ತುಳುನಾಡ ಧ್ವಜವನ್ನು ಅಳವಡಿಸಿಕೊಂಡಿದ್ದಾರೆ. ಒಮನ್‌ನಲ್ಲಿ ತಮ್ಮ ಪ್ರವಾಸ ಕೊನೆಗೊಳಿಸಿ ಭಾರದತ್ತ ಆಗಮಿಸಲಿದ್ದಾರೆ. ಶರತ್‌ ಅವರು 2024ರಲ್ಲೂ ಬೈಕ್‌ನಲ್ಲಿ ಮಂಗಳೂರಿನಿಂದ ಗಲ್ಫ್ ದೇಶಕ್ಕೆ ಪ್ರವಾಸ ಕೈಗೊಂಡಿದ್ದರು.