ಶರಾವತಿ ನದಿಯನ್ನು ಉಳಿಸಿ ಎನ್ನುವ ಪಾದಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. 36 ಕಿಮೀ ದೂರದ ಪಾದಯಾತ್ರೆ ಗುರುವಾರ ಹೊನ್ನಾವರ ತಹಸೀಲ್ದಾರ್‌ ಕಚೇರಿ ಬಳಿ ಮುಕ್ತಾಯವಾಯಿತು.

ಹೊನ್ನಾವರ: ಶರಾವತಿ ನದಿಯನ್ನು ಉಳಿಸಿ ಎನ್ನುವ ಪಾದಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಶರಾವತಿ ನದಿ ಭಗವಂತನ ಸೃಷ್ಟಿ, ಅದನ್ನು ಇರುವ ಹಾಗೆ ಹರಿಯಲು ಬಿಡಿ ಎಂಬ ಘೋಷವಾಕ್ಯದೊಂದಿಗೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಮತ್ತು ಜಿಲ್ಲೆಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆಗ್ರಹಿಸಿ 36 ಕಿಮೀ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿ ತಲುಪಿತು. ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಪಾದಯಾತ್ರೆ ಮುಕ್ತಾಯಗೊಳಿಸಲಾಯಿತು.

ಬುಧವಾರ ಬೆಳಗ್ಗೆ ಗೇರುಸೊಪ್ಪಾದಿಂದ ಆರಂಭಗೊಂಡಿದ್ದ ಈ ಪಾದಯಾತ್ರೆ ಬುಧವಾರ ಸಂಜೆ ಕವಲಕ್ಕಿ ತಲುಪಿತ್ತು. ಎರಡನೇ ದಿನವಾದ ಗುರುವಾರ ಕವಲಕ್ಕಿಯಿಂದ ಮುಂದುವರಿದು, ನೂರಾರು ಪರಿಸರ ಪ್ರೇಮಿಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಹಸೀಲ್ದಾರ್ ಕಚೇರಿ ತಲುಪಿತು.

ಈ ವೇಳೆ ಮಾತನಾಡಿದ ಮಾರುತಿ ಗುರೂಜಿ, ಉತ್ತರ ಕನ್ನಡ ಜಿಲ್ಲೆಗೆ ಪರಿಸರ ನಾಶ ಮಾಡುವ ಯೋಜನೆಗಳು ಬೇಡ. ಬದಲಾಗಿ ಪರಿಸರ ಪೂರಕ ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಿ ಎಂದು ಆಗ್ರಹಿಸಿದರು.

ಪಾದಯಾತ್ರೆಗೆ ಜೆಡಿಎಸ್ ಬೆಂಬಲ: ಈ ಪಾದಯಾತ್ರೆಗೆ ಜೆಡಿಎಸ್ ಅಧಿಕೃತ ಬೆಂಬಲ ಸೂಚಿಸಿದೆ. ಮುಖಂಡರಾದ ಸೂರಜ್ ನಾಯ್ಕ ಸೋನಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಮಾಜ ಮತ್ತು ಪರಿಸರದ ಒಳಿತಿಗಾಗಿ ನಡೆಯುವ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಘೋಷಿಸಿದರು.

ಸಮಿತಿ ರಚಿಸಿದವರು ನಾಪತ್ತೆ: ಸಮಿತಿ ರಚಿಸಿಕೊಂಡು ಅಖಾಡಕ್ಕೆ ಇಳಿಯದವರ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟ ಎಲ್ಲೋ ಮೂಲೆಯಲ್ಲಿ ಕೂತು ಮಾಡುವುದಲ್ಲ ಅಥವಾ ಪ್ರಚಾರಕ್ಕಾಗಿ ಹುದ್ದೆ ಪಡೆಯುವುದಲ್ಲ. ಅಖಾಡಕ್ಕೆ ಇಳಿದು ಜನರೊಂದಿಗೆ ನಡೆದರೆ ಮಾತ್ರ ಸಂಘಟನೆಗೆ ಶಕ್ತಿ ಸಿಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಸಾಗರದ ಅಖಿಲೇಶ ಚಿಪಳಿ, ರೈತ ಮುಖಂಡ ರವಿ ಪಾಟೀಲ, ಶಿವರಾಜ ಮೇಸ್ತ, ಮಂಗಲದಾಸ ನಾಯ್ಕ, ಜಯದತ್ತ ಹೆಗಡೆ, ಸುಬ್ರಹ್ಮಣ್ಯ ಹಾಗೂ ಜೆಡಿಎಸ್ ತಾಲೂಕಾಧ್ಯಕ್ಷ ಟಿ.ಟಿ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಮುಖವಾಡ ಕಳಚುತ್ತೇನೆ: ಶರಾವತಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವವರೆಗೂ ನಾವು ಹೋರಾಟದಿಂದ ವಿಶ್ರಮಿಸುವುದಿಲ್ಲ. ರಾಜಕಾರಣಿಗಳು ಬಡವರನ್ನು ಮತಕ್ಕಾಗಿ ಬಳಸಿಕೊಂಡು ಲೂಟಿ ಹೊಡೆಯಬಾರದು. ಈಗಾಗಲೇ ಒಬ್ಬ ರಾಜಕಾರಣಿಯ ಮುಖವಾಡ ಕಳಚಿದ್ದೇನೆ, ಸಮಯ ಬಂದಾಗ ಇನ್ನೊಬ್ಬರನ್ನೂ ಬಯಲಿಗೆಳೆಯುತ್ತೇನೆ ಎಂದು ಮಾಸ್ತಪ್ಪ ನಾಯ್ಕ ಬಲಸೆ ಹೇಳಿದರು.