ಭವಿಷ್ಯಕ್ಕಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಗತ್ಯ, ಆತಂಕ ಬೇಡ: ವಿಜಯ

| Published : Oct 29 2025, 01:30 AM IST

ಭವಿಷ್ಯಕ್ಕಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಗತ್ಯ, ಆತಂಕ ಬೇಡ: ವಿಜಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ವಿದ್ಯುತ್ ನಿಗಮ ಶರಾವತಿ ಕಣಿವೆಯಲ್ಲಿ 2000 ಮೆ.ವ್ಯಾ. ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಉದ್ದೇಶಿಸಿದ್ದು, ಇದು ರಾಜ್ಯದ ಭವಿಷ್ಯದಲ್ಲಿ ಮಹತ್ತರ ಪಾತ್ರ ವಹಿಸಲಿದೆ.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ಕನ್ನಡಪ್ರಭ ವಾರ್ತೆ ಕಾರವಾರ

ಕರ್ನಾಟಕ ವಿದ್ಯುತ್ ನಿಗಮ ಶರಾವತಿ ಕಣಿವೆಯಲ್ಲಿ 2000 ಮೆ.ವ್ಯಾ. ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಉದ್ದೇಶಿಸಿದ್ದು, ಇದು ರಾಜ್ಯದ ಭವಿಷ್ಯದಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಕೆಪಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಂ. ವಿಜಯ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಯೋಜನೆಗೆ ಕೇವಲ 100.645 ಹೆಕ್ಟೇರ್ ಪ್ರದೇಶ ಬಳಸಲಾಗುತ್ತಿದ್ದು, ಅದರಲ್ಲಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದೆ. ಯೋಜನೆಗೆ ಈಗಾಗಲೇ ಇರುವ ಗೇರುಸೊಪ್ಪ ಹಾಗೂ ತಲಕಳಲೆ ಅಣೆಕಟ್ಟುಗಳನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತೂ ಹೊಸದಾಗಿ ಆಣೆಕಟ್ಟು ನಿರ್ಮಿಸುವುದಿಲ್ಲ ಎಂದರು.

ಯೋಜನೆಯಿಂದ ಭೂ ಕುಸಿತದ ಆತಂಕ ಜನರಲ್ಲಿದೆ. ಆದರೆ ಇಂತಹ ಯಾವುದೇ ಅಪಾಯಗಳು ಇಲ್ಲ ಎನ್ನುವುದನ್ನು ಭೂಸರ್ವೇಕ್ಷಣಾ ಇಲಾಖೆ ಹಾಗೂ ಕೇಂದ್ರ ವಿದ್ಯುತ್ ಪ್ರಾಧಿಕಾರ ವೈಜ್ಞಾನಿಕವಾಗಿ ಖಚಿತಪಡಿಸಿದೆ ಎಂದು ತಿಳಿಸಿದರು.

ಈ ಯೋಜನೆಗೆ ಒಮ್ಮೆ ಮಾತ್ರ 0.37 ಟಿಎಂಸಿ ನೀರನ್ನು ಬಳಸಲಾಗುತ್ತದೆ. ಇದರಿಂದ ನದಿಯಲ್ಲಿ ನೀರಿನ ಹರಿವು ಅಥವಾ ಶರಾವತಿ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಕೃಷಿ, ಕುಡಿಯುವ ನೀರು, ಮೀನುಗಾರಿಕೆ ಅಥವಾ ಸಮುದ್ರದ ನೀರಿನ ಗುಣಮಟ್ಟದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ವಿವರಿಸಿದರು.

ಯೋಜನೆಯಿಂದ ಉತ್ಪಾದಿತ ವಿದ್ಯುತ್ ಅನ್ನು ಪ್ರಸ್ತುತ ಇರುವ ಗ್ರಿಡ್ ವ್ಯವಸ್ಥೆಯ ಮೂಲಕ ಸರಬರಾಜು ಮಾಡಲಾಗುತ್ತದೆ. 220 ಕೆವಿ ವ್ಯವಸ್ಥೆಯನ್ನು 400 ಕೆವಿ ಮಟ್ಟಕ್ಕೆ ಏರಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಹೆಚ್ಚುವರಿ ಭೂಮಿ ಅಗತ್ಯವಿಲ್ಲ ಎಂದು ಹೇಳಿದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವಿದ್ಯುತ್ ಪ್ರಾಧಿಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ. ರಾಜ್ಯ ಹಾಗೂ ಕೇಂದ್ರ ವನ್ಯಜೀವಿ ಮಂಡಳಿಗಳೂ ಯೋಜನೆಗೆ ಅನುಮತಿ ನೀಡಿವೆ ಎಂದರು.

ಮುಖ್ಯ ಎಂಜಿನಿಯರ್ ಶಿಲ್ಪಾ ಡಿ. ರಾಜ್, ಪರಿಸರ ಸ್ನೇಹಿ ತಂತ್ರಜ್ಞಾನ, ಕಡಿಮೆ ಭೂಮಿ ಬಳಕೆ, ಮತ್ತು ನವೀಕರಿಸಬಹುದಾದ ಇಂಧನದ ಪರಿಣಾಮಕಾರಿ ಶೇಖರಣೆಯಿಂದ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕರ್ನಾಟಕದ ಶಾಶ್ವತ ವಿದ್ಯುತ್ ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.

ಎಂಜಿನಿಯರ್‌ಗಳಾದ ಶ್ರೀಲಕ್ಷ್ಮೀ, ಮಾದೇಶ, ಪ್ರದೀಪ್, ಎಸ್.ಎಂ. ಗಿರೀಶ್ ಇದ್ದರು.