ಶರಾವತಿ ಪಂಪ್ಡ್ ಸ್ಟೋರೇಜ್ ಅಂತಹ ಯೋಜನೆಗಳಿಂದ ನಮ್ಮ ಜಿಲ್ಲೆಯನ್ನು ಉಳಿಸಿ, ನಮಗೆ ಬದುಕಲು ಬಿಡಿ, ಈ ಯೋಜನೆ ಮಾಡೇ ಮಾಡುತ್ತೇನೆಂದು ಸರ್ಕಾರ ಪಣತೊಟ್ಟರೆ ಜಿಲ್ಲೆಯ ಜನರ ಹೆಣದ ಮೇಲೆ ಯೋಜನೆ ಮಾಡಬೇಕಾಗುತ್ತದೆ.
ಅಧಿವೇಶನದಲ್ಲಿ ಶಾಸಕ ಎಚ್ಚರಿಕೆ, ಯೋಜನೆ ಸಮರ್ಥಿಸಿದ ಜಾರ್ಜ್ ಕನ್ನಡಪ್ರಭ ವಾರ್ತೆ ಕುಮಟಾ
ಶರಾವತಿ ಪಂಪ್ಡ್ ಸ್ಟೋರೇಜ್ ಅಂತಹ ಯೋಜನೆಗಳಿಂದ ನಮ್ಮ ಜಿಲ್ಲೆಯನ್ನು ಉಳಿಸಿ, ನಮಗೆ ಬದುಕಲು ಬಿಡಿ, ಈ ಯೋಜನೆ ಮಾಡೇ ಮಾಡುತ್ತೇನೆಂದು ಸರ್ಕಾರ ಪಣತೊಟ್ಟರೆ ಜಿಲ್ಲೆಯ ಜನರ ಹೆಣದ ಮೇಲೆ ಯೋಜನೆ ಮಾಡಬೇಕಾಗುತ್ತದೆ ಎಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಗುರುವಾರ ಸರ್ಕಾರಕ್ಕೆ ಶಾಸಕ ದಿನಕರ ಶೆಟ್ಟಿ ಖಡಕ್ ಎಚ್ಚರಿಕೆ ನೀಡಿದರು.ಈಗಾಗಲೇ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ಯೋಜನೆಗಳು ಬಂದಿವೆ. ಯೋಜನೆಗಳಿಗಾಗಿ ಲಕ್ಷಾಂತರ ಜನ ತ್ಯಾಗ ಮಾಡಿದ್ದಾರೆ. ಆದರೆ ಅವರ ತ್ಯಾಗಕ್ಕೆ ಸರ್ಕಾರದಿಂದ ಏನೂ ಲಾಭವಾಗಿಲ್ಲ. ರಾಜ್ಯದಲ್ಲಿ ಪಶ್ಚಿಮ ಘಟ್ಟದ ಶರಾವತಿ ಇಕ್ಕೆಲ ಪ್ರದೇಶಕ್ಕೆ ವಿಶೇಷ ಮಹತ್ವ ಇದೆ. ನಮ್ಮ ಪರಿಸರ ಉಳಿಯಬೇಕು. ಯೋಜನೆಯ ೭ ಕಿಮೀ ಸುರಂಗದ ಸ್ಪಷ್ಟತೆ ಇಲ್ಲ. ಜಿಲ್ಲೆಯಲ್ಲಿ ಭೂಕುಸಿತದ ಅತಂಕವಿದೆ. ಮೊದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಬೇಕು ಎಂದು ಅಧಿವೇಶನದ ಮೂಲಕ ಎರಡನೇ ಬಾರಿಗೆ ಮನವಿ ಮಾಡುತ್ತಿದ್ದೇನೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ. ಜಾರ್ಜ್, ಯೋಜನೆಯ ಬಗ್ಗೆ ಶಾಸಕ ದಿನಕರ ಶೆಟ್ಟ ಅವರಿಗೆ ಆತಂಕವಿದೆ. ಬಹುಶಃ ಅವರಿಗೆ ಮಾಹಿತಿಯ ಕೊರತೆ ಇರಬಹುದು. ಈಗಾಗಲೇ ಸಂಪೂರ್ಣ ಮಾಹಿತಿ ಕಳುಹಿಸಿ ಕೊಡಲಾಗಿದೆ. ನಿಮಗೆ ಅಥವಾ ಯಾರಿಗೆಲ್ಲ ಸಂಶಯವಿದೆಯೋ ಅವರಿಗೆ ಮನವರಿಕೆ ಮಾಡಲು ಮತ್ತೊಮ್ಮೆ ಪ್ರಯತ್ನಿಸುತ್ತೇನೆ ಎಂದರು.ಶರಾವತಿ ಟೇಲರೀಸ್ ಯೋಜನೆ ವೇಳೆ ಸುಮಾರು ೧ ಲಕ್ಷ ಹೆಕ್ಟೇರ್ ಮುಳುಗಡೆಯಾಗಿದ್ದು, ಯೋಜನೆಗಾಗಿ ೨ ಲಕ್ಷ ಮರ ಕಡಿಯಲಾಗಿತ್ತು. ಈ ಯೋಜನೆಯಿಂದ ೧ ಎಕರೆಯೂ ಮುಳುಗಡೆಯಾಗುವುದಿಲ್ಲ. ಪ್ರಸ್ತುತ ಶರಾವತಿ ಮತ್ತು ವಾರಾಹಿ ಸೇರಿ ೧೪೦೦ ಮೆಗಾವ್ಯಾಟ್ ಸಿಗಲಿದೆ. ಇಲ್ಲಿ ಉಪಯೋಗಿಸಿದ ನೀರನ್ನು ಮರಳಿ ಮೇಲೆ ತಂದು ವಿದ್ಯುತ್ ಉತ್ಪಾದನೆಯಾಗಲಿದೆ. ಕಾರಣವೇನೆಂದರೆ ರಾಜ್ಯ ಸಾಕಷ್ಟು ಪುನರ್ಬಳಕೆಯ ಇಂಧನ ಉತ್ಪಾದಿಸುತ್ತಿದೆ. ಸೌರಶಕ್ತಿ, ಗಾಳಿಶಕ್ತಿಯಿಂದ ರಾಯಚೂರು, ಗದಗ ಇನ್ನಿತರ ಕಡೆಗಳಲ್ಲಿ ಉತ್ತಮವಾಗಿ ಹಸಿರುಶಕ್ತಿ ಉತ್ಪಾದಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಹಸಿರು ಇಂಧನ ಉತ್ಪಾದನೆಯಲ್ಲಿ ಮೊದಲ ಸ್ಥಾನ ಗಳಿಸಲಿದೆ.
೨೦೧೪ರಲ್ಲಿ ನಾಂದಿಯಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾವನೆಗೆ ೨೦೨೦ರಲ್ಲಿ ಬಿಜೆಪಿ ಸರ್ಕಾರ ಇರುವಾಗಲೇ ಕೇಂದ್ರ ವಿದ್ಯುತ್ ವಿಭಾಗಕ್ಕೆ ಕಳಿಸಿ ಪ್ರಸ್ತಾವನೆ ಮಂಜೂರಾಗಿದೆ. ಈಗಾಗಲೇ ೧೩ ವಿವಿಧ ವಿಭಾಗಗಳ ಅನುಮತಿ ಪಡೆಯಲಾಗಿದ್ದು, ಎಲ್ಲ ಅನುಮತಿ ದೊರೆತ ಬಳಿಕವೇ ಯೋಜನೆ ಆರಂಭಿಸಲು ಸಾಧ್ಯ. ಕಾವೇರಿ ನೀರನ್ನು ತಂದಂತೆ ಇಲ್ಲಿಯೂ ಪೈಪ್‌ಲೈನ್ ಮೂಲಕ ನೀರು ಸಾಗಿಸಲಾಗುವುದು. ಹೆಚ್ಚೆಂದರೆ ೨೫ ಎಕರೆ ಸ್ಥಳದಲ್ಲಿ ಯೋಜನೆಯ ಮುಖ್ಯ ಸ್ಥಾನ ಇರಲಿದ್ದು, ಪೈಪ್ ಹಾಕಿದ ಬಳಿಕ ಆ ಸ್ಥಳಗಳು ಮರಳಿ ಅರಣ್ಯವೇ ಆಗಿರುತ್ತದೆ. ನಮ್ಮ ಸರ್ಕಾರ ಪರಿಸರಕ್ಕೆ ಹಾನಿಯಾಗುವ ಯಾವುದೇ ಕೆಲಸ ಮಾಡುವುದಿಲ್ಲ. ನಮಗೆ ಶಕ್ತಿ ಬೇಕಾಗಿದೆ. ಕಳೆದ ವರ್ಷಕ್ಕಿಂತ ೧೦೦೦ ಮೆಗಾವ್ಯಾಟ್ ಬೇಡಿಕೆ ಹೆಚ್ಚಿದೆ. ಆದರೂ ಯಾವುದೇ ಪವರ್ ಕಟ್ ಇಲ್ಲದೇ ೭ ತಾಸು ವಿದ್ಯುತ್ ನೀರಾವರಿಗೆ ಕೊಡುತ್ತಿದ್ದೇವೆ ಎಂದರು.ಈ ನಡುವೆ ಶಾಸಕ ದಿನಕರ ಶೆಟ್ಟಿ ನೀರನ್ನು ಪಂಪ್ ಮಾಡುವುದಕ್ಕೆ ಎಷ್ಟು ವಿದ್ಯುತ್ ಬಳಸುತ್ತೀರಿ ಎಂದು ಸಚಿವರನ್ನು ಪದೇ ಪದೇ ಕೇಳಿದರೂ ಸಚಿವ ಕೆ.ಜೆ. ಜಾರ್ಜ್ ಉತ್ತರಿಸದೇ ಹೋದರು. ಬಳಿಕ ಈ ಬಗ್ಗೆ ಮಾಹಿತಿ ತರಿಸಿ ಕೊಡುತ್ತೇನೆಂದು ಸಚಿವರು ಸಮಜಾಯಿಸಿ ಕೊಟ್ಟಾಗ, ಎದ್ದುನಿಂತ ಶಾಸಕ ದಿನಕರ ಶೆಟ್ಟಿ, ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಜನರು ಸಾಯುವುದಕ್ಕೂ ಸಿದ್ಧರಿದ್ದಾರೆ. ನೀವೇನಾದರೂ ಜನರ ವಿರೋಧದ ನಡುವೆ ಯೋಜನೆ ಮಾಡಲು ಪಣತೊಟ್ಟರೆ ಜನರ ಹೆಣದ ಮೇಲೆ ಯೋಜನೆ ಮಾಡಬೇಕಾಗುತ್ತದೆ ಎಂಬುದೇ ನಮ್ಮ ಅಂತಿಮ ಎಚ್ಚರಿಕೆ ಎಂದರು.