ದಕ್ಷಿಣ ಕನ್ನಡ ಜಿಲ್ಲೆಯ ನಾಗ ಕ್ಷೇತ್ರಗಳಲ್ಲಿ ಷಷ್ಠಿ ಸಂಭ್ರಮ

| Published : Dec 08 2024, 01:17 AM IST

ದಕ್ಷಿಣ ಕನ್ನಡ ಜಿಲ್ಲೆಯ ನಾಗ ಕ್ಷೇತ್ರಗಳಲ್ಲಿ ಷಷ್ಠಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಬೆಳಗ್ಗೆ 7 ಗಂಟೆಗೆ ಶ್ರೀ ಅನಂತ ಹಾಗೂ ಪದ್ಮನಾಭ ದೇವರ ಜೋಡು ದೇವರ ಬಲಿ ಉತ್ಸವ ಹೊರಟು ರಾಜಾಂಗಣದಲ್ಲಿ ವಿಶೇಷ ಕ್ಷೇತ್ರ ಪಾಲ ಪೂಜೆಯೊಂದಿಗೆ ದೇವರಿಗೆ ಉಡುಕೆ ಸುತ್ತು, ಚೆಂಡೆ ಸುತ್ತು ಹಾಗೂ ವಿಶೇಷವಾದ ಚಂದ್ರಮಂಡಲ ರಥೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡದ ವಿವಿಧ ನಾಗ ಕ್ಷೇತ್ರಗಳಲ್ಲಿ ಷಷ್ಠಿ ಮಹೋತ್ಸವ ಸಡಗರ, ಸಂಭ್ರಮದಿಂದ ಶನಿವಾರ ನೆರವೇರಿತು.

ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಕುಡುಪು ಅನಂತ ಪದ್ಮನಾಭ, ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ವಿವಿಧೆಡೆ ನಡೆದ ಷಷ್ಠಿ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.

ಕುಡುಪು ಕ್ಷೇತ್ರಕ್ಕೆ ಜನಸಾಗರ:

ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ಮುಂಜಾನೆಯಿಂದಲೇ ಭಕ್ತಸಾಗರ ತುಂಬಿತ್ತು. ದೇವರಿಗೆ ಹಿಂಗಾರ, ಕೇದಗೆ, ಸಂಪಿಗೆ ಮಲ್ಲಿಗೆ ಹೂಗಳನ್ನು ಭಕ್ತರು ಅರ್ಪಿಸಿದರು. ಮಾತ್ರವಲ್ಲದೆ, ಚಿನ್ನ, ಬೆಳ್ಳಿ ಹರಕೆ ಅರ್ಪಿಸಿ, ತಂಬಿಲ, ಪಂಚಾಮೃತ ಸೇವೆ ಸಲ್ಲಿಸಿದರು.

ಬ್ರಹ್ಮರಥೋತ್ಸವ:

ಅನಂತ ಪದ್ಮನಾಭ ದೇವರಿಗೆ ವಿವಿಧ ಸೇವೆ, ಪೂಜೆಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ದೇವರ ಬಲಿ ಹೊರಟು ಬ್ರಹ್ಮರಥ ಇರುವ ರಾಜಬೀದಿಗೆ ಆಗಮಿಸಿತು. ಬಳಿಕ ನಡೆದ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ಕುಡುಪು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮೊಕ್ತೇಸರ ಹಾಗೂ ಪವಿತ್ರಪಾಣಿ ಕೆ. ಬಾಲಕೃಷ್ಣ ಕಾರಂತ, ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಕೆ. ಮನೋಹರ ಭಟ್‌, ಮೊಕ್ತೇಸರರಾದ ಕೆ. ಭಾಸ್ಕರ, ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿ, ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್‌, ಮತ್ತಿತರರ ಪ್ರಮುಖರು ಇದ್ದರು.20 ಸಾವಿರ ಅನ್ನಪ್ರಸಾದ:

ಷಷ್ಠಿ ಮಹೋತ್ಸವ ಪ್ರಯುಕ್ತ ಕುಡುಪು ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಗೆ ಅನ್ನದ ರಾಶಿಗೆ ಪಲ್ಲಪೂಜೆ ಜರುಗಿ, ಬಳಿಕ ಅನ್ನಪ್ರಸಾದ ವಿತರಣೆ ಆರಂಭಗೊಂಡಿತು. ಸಂಜೆವರೆಗೆ 20 ಸಾವಿರಕ್ಕೂ ಅಧಿ​​ಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ದೇವರಿಗೆ 15 ಸಾವಿರಕ್ಕೂ ಅಧಿಕ ತಂಬಿಲ, 6 ಸಾವಿರಕ್ಕೂ ಹೆಚ್ಚು ಪಂಚಾಮೃತ ಅಭಿಷೇಕ ಸೇವೆ ನಡೆಯಿತು.ಇಂದಿನ ವಿಶೇಷ:

ಭಾನುವಾರ ಬೆಳಗ್ಗೆ 7 ಗಂಟೆಗೆ ಶ್ರೀ ಅನಂತ ಹಾಗೂ ಪದ್ಮನಾಭ ದೇವರ ಜೋಡು ದೇವರ ಬಲಿ ಉತ್ಸವ ಹೊರಟು ರಾಜಾಂಗಣದಲ್ಲಿ ವಿಶೇಷ ಕ್ಷೇತ್ರ ಪಾಲ ಪೂಜೆಯೊಂದಿಗೆ ದೇವರಿಗೆ ಉಡುಕೆ ಸುತ್ತು, ಚೆಂಡೆ ಸುತ್ತು ಹಾಗೂ ವಿಶೇಷವಾದ ಚಂದ್ರಮಂಡಲ ರಥೋತ್ಸವ ನಡೆಯಲಿದೆ.