ಸಾರಾಂಶ
ಮುರಳೀಧರ್ ಶಾಂತಳ್ಳಿಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮನೆಯಲ್ಲಿ ಬಡತನವಿದ್ದರೂ ಕ್ರೀಡೆಯಲ್ಲಿ ಶ್ರೀಮಂತ ಪ್ರತಿಭೆ ತಾನಿಯಾ ಅಸ್ಲಾಂ ಹಾಕಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿದ್ದು, ವಿಶೇಷ ಕೌಶಲದಿಂದಾಗಿ ಈಗ ರಾಷ್ಟ್ರಮಟ್ಟದ ಪಂದ್ಯಾವಳಿಗಾಗಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.ಇಲ್ಲಿನ ಚೌಡ್ಲು ಗ್ರಾಮದ ತಾನಿಯಾ, ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಆಸಕ್ತಿ ಹೊಂದಿದ್ದರು. ಆಕೆಯ ತಂದೆ ಅಸ್ಲಂ ಕೂಡ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಚಿಕ್ಕಂದಿನಿಂದಲೇ ಗಮನಿಸುತ್ತಿದ್ದ ಬಾಲಕಿ ತಾನಿಯಾ, ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಮನೆಯಿಂದ ಹೊರಬಂದು ೫ನೇ ತರಗತಿಗೆ ಮಡಿಕೇರಿಯ ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆಯಾದಳು. ಹೀಗೆ ಕ್ರೀಡಾ ಜೀವನ ಆರಂಭಿಸಿದ ಆಕೆ ಈಗ ಹೊಸ ಎತ್ತರಕ್ಕೇರಲಾರಂಭಿಸಿದ್ದಾರೆ.
೨೦೧೧ರಲ್ಲಿ ಸೋಮವಾರಪೇಟೆಯ ಕೋಳಿ ಅಂಗಡಿಯಲ್ಲಿ ನೌಕರನಾಗಿರುವ ಅಸ್ಲಂ ಮತ್ತು ಟೈಲರ್ ವೃತ್ತಿಯಿಂದ ಜೀವನ ಸಾಗಿಸುತ್ತಿರುವ ತಾಯಿ ಅಸ್ಮಾ ಭಾನು ಅವರ ಪುತ್ರಿಯಾಗಿ ಜನಿಸಿದ ತಾನಿಯಾ, ಪ್ರಾಥಮಿಕ ಶಿಕ್ಷಣವನ್ನು ಓಎಲ್‌ವಿ ಕಾನ್ವೆಂಟ್‌ನಲ್ಲಿ ಪೂರೈಸಿದರು. ನಂತರ ೫ನೇ ತರಗತಿಗೆ ಮಡಿಕೇರಿಯ ಕ್ರೀಡಾಶಾಲೆಗೆ ಆಯ್ಕೆಯಾದರು. ೨೦೧೧ರಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸದಿದ ಮಿನಿ ಓಲಿಂಪಿಕ್ಸ್‌ನಲ್ಲಿ ಹಾಕಿ ಕೂರ್ಗ್ ತಂಡಕ್ಕೆ ಆಯ್ಕೆಯಾಗಿ ಕ್ರೀಡಾ ಕ್ಷೇತ್ರದಲ್ಲಿ ತಾನಿಯಾ ಗಮನ ಸೆಳೆದಿದ್ದಳು. ಇವರು ೨೦೩೧ರಲ್ಲಿ ಜರುಗಿದ ಮಿನಿ ಒಲಂಪಿಕ್ಸ್ ಕ್ರೀಡೆಯಲ್ಲಿ ಹಾಕಿ ಕೂರ್ಗ್ ತಂಡವನ್ನು ಪ್ರತಿನಿಧಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಗಮನ ಸೆಳೆದಳು. ನಂತರ ಕೊಡಗು ಜಿಲ್ಲಾ ಮಟ್ಟದ ಹಾಕಿ ಕ್ರೀಡೆಯಲ್ಲಿ ಪಾಲ್ಗೊಂಡು ಬೆಳ್ಳಿ ಪದಕ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾದಳು. ನಂತರ ೨೦೨೧ ಮತ್ತು ೨೦೨೨ರಲ್ಲಿ ಸತತವಾಗಿ ರಾಜ್ಯಮಟ್ಟದ ಹಾಕಿ ಕ್ರೀಡೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದರು.ಇದೀಗ ೧೪ನೇ ವಯಸ್ಸಿನ ರಾಷ್ಟ್ರಮಟ್ಟದ ತಂಡಕ್ಕೆ ಆಯ್ಕೆಯಾಗಿ ರಾಜ್ಯವನ್ನು ಪ್ರತಿನಿಧಿಸಲು ಸಜ್ಜಾಗಿದ್ದು, ಮುಂದೆ ರಾಷ್ಟ ತಂಡವನ್ನು ಪ್ರತಿನಿಧಿಸಲು ಹಾತೊರೆಯುತ್ತಿದ್ದಾರೆ.
ಪ್ರಸ್ತುತ ಮಡಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯನ್ನು ಬಾಲಕಿಯರ ವಿಭಾಗದಲ್ಲಿ ಪ್ರತಿನಿಧಿಸುತ್ತಿರುವ ಏಕೈಕ ಮುಸ್ಲಿಂ ಹಾಕಿ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಕ್ರೀಡಾ ಕ್ಷೇತ್ರಕ್ಕೆ ಹಿರಿಯ ಹಾಕಿಪಟುಗಳಾದ ಅಭಿಷೇಕ್ ಗೋವಿಂದಪ್ಪ, ಅಶೋಕ್ ಮತ್ತು ಕೋಚ್ ಬಿಂದಿಯಾ, ಸಾಹಿತಿ ನ.ಲ.ವಿಜಯ ಪ್ರೋತ್ಸಾಹ ಕಾರಣ ಎಂದು ತಂದೆ ಅಸ್ಲಂ ಸ್ಮರಿಸುತ್ತಾರೆ.ಕೋಟ್‌ಬಾಲಕಿಗೆ ಅವರ ತಂದೆ ತಾಯಿಯ ಪ್ರೋತ್ಸಾಹ, ಶ್ರಮ ಮತ್ತು ತ್ಯಾಗ ಅಪಾರವಾಗಿದೆ. ಎಷ್ಟೋ ಮುಸಲ್ಮಾನ ಕುಟುಂಬಗಳಿಗೆ ಈ ಬಾಲಕಿ ಸ್ಫೂರ್ತಿಯಾಗಿದ್ದಾಳೆ. ಅವಳು ಭಾರತ ತಂಡವನ್ನು ಪ್ರತಿನಿಧಿಸುವ ದಿನ ಮುಂದಕ್ಕೆ ಬರಲಿ. ಅವಳ ಭವಿಷ್ಯ ಉಜ್ವಲವಾಗಲಿ. ಭಾರತ ತಂಡ ಪ್ರತಿನಿಧಿಸಿ ಹೆಸರು ಮಾಡಿದ ಜಾಫರ್ ಇಕ್ಬಾಲ್, ಮಹಮ್ಮದ್ ಶಾಹಿದ್, ಮಂಗಳೂರು ಕ್ರೀಡಾ ಹಾಸ್ಟೆಲ್‌ನಲ್ಲಿದ್ದು ಆಲ್ ಇಂಡಿಯಾ ವಿವಿಯ ಆಟಗಾರ ತಾಸಿನ್‌ಷೇಕ್, ಸೋಮವಾರಪೇಟೆಯ ಹಿರಿಯ ಹಾಕಿ ಪಟು ಅಂಜದ್ ಭಯ್ಯಾ, ಓಎಲ್‌ವಿ ಶಾಲೆಯ ದೈಹಿಕ ಶಿಕ್ಷಕ ಮೋಹನ್ ಅವರ ಆಶೀರ್ವಾದ ಎಂದೆಂದಿಗೂ ಇರಲಿ.। ಮರ್ವಿನ್ ಡಿಸೋಜಾ, ಹಿರಿಯ ಕ್ರೀಡಾಪಟು, ಸೋಮವಾರಪೇಟೆ.
-------------ಕೊಡಗಿನ ಮೂರು ಹಾಸ್ಟೆಲ್‌ಗಳ ಪೈಕಿ ಏಕೈಕ ಮುಸ್ಲಿಂ ಹಾಕಿ ಆಟಗಾರ್ತಿಯಾಗಿ ಭರವಸೆ ಮೂಡಿಸುತ್ತಿರುವ ತಾನಿಯಾ ಮುಂದೆ ಉತ್ತಮ ಆಟಗಾರ್ತಿಯಾಗಿ ಹೊರಹೊಮ್ಮುವುದವರಲ್ಲಿ ಯಾವುದೇ ಸಂಶಯವಿಲ್ಲ. ಉತ್ತಮವಾಗಿ ಆಟವಾಡುತ್ತಿರುವ ಈಕೆ ಮುಂದೆ ದೇಶವನ್ನು ಪ್ರತಿನಿಧಿಸುವಂತಾಗಲಿ. ಈಗಾಗಲೇ ಮಡಿಕೇರಿಯಲ್ಲಿ ಜರುಗಿದ ಅಂಡರ್-೧೪ ತಂಡವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಕೂಡ ಆಯ್ಕೆಯಾಗಿದ್ದಳು. ಮುಂದಿನ ದಿನಗಳಲ್ಲಿ ಅವಳಿಗೆ ಉನ್ನತ ಭವಿಷ್ಯವಿದೆ.
। ಬಿಂದಿಯಾ, ಹಾಕಿ ಕೋಚ್, ಮಡಿಕೇರಿ ಕ್ರೀಡಾಶಾಲೆ, ಕೊಡಗು.--------------
ಸಹೋದರ ಮಹ್ಮದ್ ಆಸೀಫ್ ಕ್ರೀಡಾಶಾಲೆಗೆ ಆಯ್ಕೆಯಾಗಲು ವಿಫಲವಾಗಿದ್ದು, ಪುತ್ರಿ ತಾನಿಯಾ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತು. ಆ ದಿನವೇ ತಾನೂ ಕೂಡ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಲು ಉತ್ಸುಕಳಾದಳು. ಅವಳ ಉತ್ಸಾಹಕ್ಕೆ ನಾನು ಕಡುಬಡತನದಲ್ಲಿದ್ದರೂ ಅವಳ ತಾಯಿಯ ಸಹಕಾರದಿಂದ ಮಡಿಕೇರಿ ಕ್ರೀಡಾಶಾಲೆಗೆ ಸೇರಿಸಿದ್ದೇವೆ. ಅವಳು ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಹೆತ್ತ ತಂದೆ ತಾಯಿಗೆ, ಓದಿದ ಶಾಲೆಗೆ, ಕೋಚ್‌ಗೆ, ಅವಳಿಗೆ ಮಾರ್ಗದರ್ಶನ ನೀಡಿ ಸಹಕರಿಸುತ್ತಿರುವ ಅಭಿ, ಅಶೋಕ್, ಸಾಹಿತಿ ನ.ಲ.ವಿಜಯಣ್ಣ ಸೇರಿದಂತೆ ಎಲ್ಲ ಕ್ರೀಡಾ ಅಭಿಮಾನಿಗಳಿಗೆ ಚಿರಋಣಿ.। ಅಸ್ಲಾಂ ಮತ್ತು ಅಸ್ಮಾಭಾನು, ಹೆತ್ತವರು, ಸೋಮವಾರಪೇಟೆ.