ಆಧುನಿಕ ತಂತ್ರಜ್ಞಾನ ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹಿರಿಯ ಪಶುವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕೀನ್ ಹೇಳಿದರು.
ಕುಷ್ಟಗಿ: ಕುರಿ ಮತ್ತು ಮೇಕೆ ಸಾಕಾಣಿಕೆಯು ಲಾಭದಾಯಕ ಉದ್ಯಮವಾಗಿದ್ದು, ಕುರಿ ಮತ್ತು ಮೇಕೆಗಳು ನಡೆದಾಡುವ ಬ್ಯಾಂಕು ಇದ್ದಂತೆ. ಆಧುನಿಕ ತಂತ್ರಜ್ಞಾನ ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹಿರಿಯ ಪಶುವೈದ್ಯಾಧಿಕಾರಿ ಹೇಳಿದರು.
ತಾಲೂಕಿನ ಹಿರೇಮನ್ನಾಪೂರ ಪಶುಚಿಕಿತ್ಸಾಲಯ ವ್ಯಾಪ್ತಿಯ ನೀರಲೂಟಿ ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳಿಗೆ ಹಮ್ಮಿಕೊಂಡಿದ್ದ ಪಿ.ಪಿ.ಆರ್. ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕುರಿಗಳನ್ನು ಸಾಕಿದವರು ಅವುಗಳನ್ನು ಬೇಕಾದಾಗ ಮಾರಾಟ ಮಾಡಿ ಹಣ ಪಡೆಯಬಹುದಾಗಿದೆ. ಇದು ಈಗ ಉದ್ಯಮವಾಗಿ ಮಾರ್ಪಟ್ಟಿದೆ. ಪದವೀಧರರು, ವಿವಿಧ ಸರ್ಕಾರಿ ನೌಕರರು ಈ ಉದ್ಯಮಕ್ಕೆ ಕಾಲಿಡುತ್ತಿದ್ದಾರೆ. ಡಿ. 31ರ ವರೆಗೆ ತಾಲೂಕಿನಾದ್ಯಾಂತ ಕುರಿ ಮತ್ತು ಮೇಕೆಗಳಿಗೆ 3ನೇ ಸುತ್ತಿನ ಪಿ.ಪಿ.ಆರ್. ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹತ್ತಿರದ ಪಶುವೈದ್ಯ ಸಂಸ್ಥೆಗಳನ್ನು ಕುರಿ ಸಾಕಾಣಿಕೆದಾರರು ಸಂಪರ್ಕಿಸಿ, ಕಡ್ಡಾಯವಾಗಿ ಪಿ.ಪಿ.ಆರ್. ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು.
ಪಿ.ಪಿ.ಆರ್. ರೋಗ ಲಕ್ಷಣಗಳು:ರೋಗಗ್ರಸ್ಥ ಕುರಿಗಳಲ್ಲಿ ಅತಿಯಾದ ಜ್ವರವಿದ್ದು, ಬಾಯಲ್ಲಿ ಹುಣ್ಣಾಗಿ, ನೊರೆಯುಕ್ತ ಜೊಲ್ಲನ್ನು ಸುರಿಸುತ್ತಿರುತ್ತವೆ. ಕಣ್ಣು ಕೆಂಪಾಗಿ, ಗೀಜು ಕಟ್ಟುವಿಕೆ, ಉಸಿರಾಟಕ್ಕೆ ತೊಂದರೆ, ಬೇದಿ, ನಿತ್ರಾಣಗೊಂಡು ಕುರಿ, ಮೇಕೆಗಳಲ್ಲಿ ಸಾವು ಸಂಭವಿಸುತ್ತವೆ. ರೋಗಗ್ರಸ್ಥ ಪ್ರಾಣಿಗಳು ಕಂಡು ಬಂದರೆ ಅವುಗಳನ್ನು ಪ್ರತ್ಯೇಕ್ಷಿಸಿ, ಪಶುವೈದ್ಯರ ಸಲಹೆ ಪಡೆಯಬೇಕು. ಮುಜಾಂಗೃತ ಕ್ರಮವಾಗಿ ಪಿ.ಪಿ.ಆರ್. ಲಸಿಕೆಯನ್ನು ಹಾಕಿಸಿ, ರೋಗವನ್ನು ತಡೆಗಟ್ಟಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಪಶುವೈದ್ಯ ಪರೀಕ್ಷರಾದ ಸೌಮ್ಯ ಪಟ್ಟಣಶೆಟ್ಟಿ, ಪ್ರವೀಣ ಬಾಳಿಗಿಡದ, ವಿರೇಶ ರಾಂಪೂರ, ಪಶು ಸಖಿಯರಾದ ಹುಲಿಗೆಮ್ಮ, ಕುರಿ ಸಾಕಾಣಿಕೆದಾರರಾದ ಮಲ್ಲಿಕಾರ್ಜುನ ಅಗಸಿಮುಂದಿನ. ಶಿವರಾಜ ಚಳ್ಳಾರಿ, ಕನಕಪ್ಪ ಚಳ್ಳಾರಿ, ಗುಂಡಪ್ಪ, ಹನಮಂತಪ್ಪ ಗ್ರಾಮದ ಎಲ್ಲಾ ಕುರಿ ಸಾಕಾಣಿಕೆದಾರರು ಉಪಸ್ಥಿತರಿದ್ದರು.